ʼಬಿಜೆಪಿ ರಾಷ್ಟ್ರೀಯ ಅಧ್ಯಕ್ಷʼರ ಆಯ್ಕೆ : ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ 11 ವರ್ಷಗಳ ಬಳಿಕ ಆರೆಸ್ಸೆಸ್ ಕದ ತಟ್ಟಲಿರುವ ಮೋದಿ!

ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: ಮುಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ʼರಬ್ಬರ್ ಸ್ಟ್ಯಾಂಪ್ʼ ಬದಲಿಗೆ ʼಪ್ರಬಲ ನಾಯಕʼನಿಗೆ ಆದ್ಯತೆ ನೀಡುವುದಾಗಿ ಆರೆಸ್ಸೆಸ್ ಹೇಳಿದೆ. ಇದು ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ ಮತ್ತು ಪ್ರಧಾನಮಂತ್ರಿಯಾಗಿ ಮೋದಿ ಅಧಿಕಾರವಹಿಸಿಕೊಂಡ 11 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸಂಘದ ಪ್ರಧಾನ ಕಚೇರಿಗೆ ಭೇಟಿ ಕೊಡುವ ಸಾಧ್ಯತೆ ಇದೆ ಎಂದು ಜೆ.ಪಿ.ಯಾದವ್ ಅವರು telegraphindia.com ದಲ್ಲಿ ಬರೆದಿರುವ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಬಿಜೆಪಿ ಪಕ್ಷದ ನೂತನ ಅಧ್ಯಕ್ಷರ ನೇಮಕಕ್ಕೆ ಮುಂದಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಆರೆಸ್ಸೆಸ್ ಈವರೆಗೆ ಯಾವುದೇ ಹೆಸರನ್ನು ಪ್ರಸ್ತಾಪಿಸದ ಕಾರಣ ಮೋದಿ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡುವಂತೆ ಮಾಡಬಹುದು. "ರಬ್ಬರ್ ಸ್ಟ್ಯಾಂಪ್" ಎಂದು ಆರೋಪಿಸಿದ ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಅವರ ಅಧಿಕಾರವಧಿಯು 2024ರ ಜನವರಿಯಲ್ಲಿ ಮುಕ್ತಾಯಗೊಂಡಿದೆ. ಆ ಬಳಿಕ ಅಧಿಕಾರ ವಿಸ್ತರಣೆ ಮಾಡಿರುವ ಕಾರಣ ಈಗ ಅವರು ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ, ಮೋದಿ ಅವರು ಅಧಿಕೃತವಾಗಿ ಮಾರ್ಚ್ 30ರಂದು ನಾಗ್ಪುರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಆರೆಸ್ಸೆಸ್ ಪ್ರಧಾನ ಕಛೇರಿಯಲ್ಲಿ ಭಾಗವತ್ ಅವರೊಂದಿಗೆ ಮಹತ್ವದ ಮಾತುಕತೆ ನಡೆಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮೋದಿ ಆರೆಸ್ಸೆಸ್ ಜೊತೆಗಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಪ್ರಯತ್ನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಘವು ತನ್ನ ನಿರ್ಧಾರದ ಜೊತೆ ಅಚಲವಾಗಿ ನಿಲ್ಲುವ ಬಿಜೆಪಿ ಅಧ್ಯಕ್ಷರನ್ನು ಬಯಸುತ್ತಿದೆ. ಅವರು ಬಲವಾದ ಮತ್ತು ವಿಶ್ವಾಸಾರ್ಹ ನಾಯಕನನ್ನು ಬಯಸುತ್ತಾರೆಯೇ ಹೊರತು ʼಹೌದು-ಮನುಷ್ಯನಲ್ಲʼ ಎಂದು ಸಂಘದ ಪ್ರಮುಖ ನಾಯಕರೊಂದಿಗಿನ ಮಾತುಕತೆಯ ವೇಳೆ ನಾನು ಅರಿತುಕೊಂಡೆ ಎಂದು ಬಿಜೆಪಿಯ ನಾಯಕರೋರ್ವರು ಹೇಳಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
1925ರಲ್ಲಿ ಸ್ಥಾಪನೆಯಾದ ಆರೆಸ್ಸೆಸ್ ಈ ವರ್ಷ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇದರಿಂದಾಗಿ ಮೋದಿ ಸಂಘದ ಪ್ರಧಾನ ಕಚೇರಿಗೆ ಭೇಟಿ ನೀಡುವ ಸಾಧ್ಯತೆಯಿದೆ. ಮಾರ್ಚ್ 30ರಂದು ನಾಗ್ಪುರದಲ್ಲಿ ಖಾಸಗಿ ಕಣ್ಣಿನ ಆಸ್ಪತ್ರೆಯ ಹೊಸ ಕಟ್ಟಡಕ್ಕೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯಲ್ಲದೆ ಮೋಹನ್ ಭಾಗವತ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಸಂಘದ ಸಂಸ್ಥಾಪಕ ಕೇಶವ್ ಬಲಿರಾಮ್ ಭಗತ್ ಅವರಿಗೆ ಗೌರವ ಸಲ್ಲಿಸಲು ಮೋದಿ ಆರೆಸ್ಸೆಸ್ ಪ್ರಧಾನ ಕಚೇರಿಗೆ ಭೇಟಿ ನೀಡುವ ಸಾಧ್ಯತೆಯಿದೆ.
ಆರೆಸ್ಸೆಸ್ ಮುಖ್ಯ ಪ್ರಚಾರಕ ಸುನಿಲ್ ಅಂಬೇಕರ್ ಮೋದಿಯವರ ಸಂಭವನೀಯ ಭೇಟಿಯ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಆದರೆ, ಅವರಿಗೆ ಸ್ವಾಗತ ಎಂದು ಹೇಳಿದರು.
ಬಿಜೆಪಿ ಮತ್ತು ಆರೆಸ್ಸೆಸ್ ನಡುವಿನ ಸಂಬಂಧಗಳು ಸಾರ್ವತ್ರಿಕ ಚುನಾವಣೆಯ ನಂತರ ಹಳಸಿದೆ. ಚುನಾವಣಾ ಪ್ರಚಾರದ ವೇಳೆ ಮೋದಿ ತನ್ನನ್ನು ʼದೈವದತ್ತʼ ಎಂದು ಬಿಂಬಿಸಲು ಯತ್ನಿಸಿದರು, ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಘೋಷಣೆಯನ್ನು ಮಾಡಿದರು. ಇದು ಆರೆಸ್ಸೆಸ್ ಮತ್ತು ಇತರ ನಾಯಕರಲ್ಲಿ ʼದುರಹಂಕಾರಿ ನಡೆʼ ಎಂದು ಅಸಮಾಧಾನಕ್ಕೆ ಕಾರಣವಾಯಿತು. ಆರೆಸ್ಸೆಸ್ ಕಾರ್ಯಕರ್ತರು ಸಾರ್ವತ್ರಿಕ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವುದನ್ನು ತಪ್ಪಿಸಿದ್ದರು. ಲೋಕಸಭೆಯಲ್ಲಿ ಬಿಜೆಪಿ ಬಹುಮತದ ಕೊರತೆ ಎದುರಿಸಿದಾಗ ಭಾಗವತ್ ʼಸೇವಕʼ ನ ʼಅಹಂಕಾರʼ ದ ಬಗ್ಗೆ ಅಸಮ್ಮತಿಯನ್ನು ವ್ಯಕ್ತಪಡಿಸಿದರು.
ಅಂದಿನಿಂದ ಮೋದಿ ಮತ್ತು ಬಿಜೆಪಿ ಆರೆಸ್ಸೆಸ್ ಜೊತೆ ಸಂಬಂಧವನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವಂತೆ ಕಂಡುಬಂದಿದೆ. ಬಿಜೆಪಿ ನಾಯಕತ್ವವು ಹರ್ಯಾಣ, ಮಹಾರಾಷ್ಟ್ರ ಮತ್ತು ದಿಲ್ಲಿ ಚುನಾವಣೆಗೆ ಮುಂಚಿತವಾಗಿ ಆರೆಸ್ಸೆಸ್ ಜೊತೆ ಸರಣಿ ಸಭೆಗಳನ್ನು ನಡೆಸಿತು. ಈ ರಾಜ್ಯಗಳಲ್ಲಿನ ಗೆಲುವುಗಳು ಸಂಘಟಿತ ಪ್ರಯತ್ನದ ಫಲಿತಾಂಶವೆಂದು ಪರಿಗಣಿಸಲಾಗಿದೆ.
ಇತ್ತೀಚಿನಿಂದ ಆರೆಸ್ಸೆಸ್ ಅನ್ನು ಶ್ಲಾಘಿಸುತ್ತಿರುವ ಮೋದಿ!
ಇತ್ತೀಚೆಗೆ ಲೆಕ್ಸ್ ಫ್ರಿಡ್ಮ್ಯಾನ್(Lex Fridman) ಅವರೊಂದಿಗಿನ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮೋದಿ, ʼಬಾಲ್ಯದಿಂದಲೂ ನನ್ನ ಜೀವನವನ್ನು ರೂಪಿಸಿದ್ದಕ್ಕೆ, ರಾಷ್ಟ್ರ ಮೊದಲು ಎಂಬ ಮನೋಭಾವವನ್ನು ಬೆಳೆಸಿದ್ದಕ್ಕೆ ಮತ್ತು ಜೀವನಕ್ಕೆ ಗುರಿಯನ್ನು ನೀಡಿದ್ದಕ್ಕೆ ಆರೆಸ್ಸೆಸ್‌ಗೆ ಅಭಿನಂದನೆ ಸಲ್ಲಿಸಿದರು. ಎಲ್ಲಕ್ಕಿಂತ ಮಿಗಿಲಾಗಿ, ನಿಜವಾದ ಜೀವನದ ಗುರಿ ಎಂದು ಏನನ್ನು ಕರೆಯಬಹುದೋ ಅದಕ್ಕೆ ಆರೆಸ್ಸೆಸ್ ಸ್ಪಷ್ಟ ದಿಕ್ಕನ್ನು ಒದಗಿಸುತ್ತದೆʼ ಎಂದು ಹೇಳಿದರು.
ಇದರ ಬೆನ್ನಲ್ಲೇ ʼಮೋದಿ ತನ್ನ ಆಯ್ಕೆಯ ಅಭ್ಯರ್ಥಿಯನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಲು ಸಂಘದ ನಾಯಕತ್ವವನ್ನು ಓಲೈಸುವ ಗುರಿಯಿಂದ ಈ ರೀತಿ ಹೊಗಳಿರಬಹುದುʼ ಎಂದು ಮೋದಿಯ ಈ ಹೇಳಿಕೆ ಬಗ್ಗೆ ಆರೆಸ್ಸೆಸ್‌ನ ಒಳಗಿರುವ ಕೆಲವರು ಹೇಳಿದ್ದಾರೆ.
ಬಿಜೆಪಿ ಹಾಲಿ ಅಧ್ಯಕ್ಷ ನಡ್ಡಾ ಅವರು ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ನೀಡಿದ ಹೇಳಿಕೆ ಆರೆಸ್ಸೆಸ್ ಅನ್ನು ಕೆರಳಿಸಿದೆ. ಸಂದರ್ಶನವೊಂದರಲ್ಲಿ ಬಿಜೆಪಿ ವರ್ಷಗಳಿಂದ ಬೆಳೆದು ಬಂದಿದೆ ಮತ್ತು ತನ್ನದೇ ಆದ ವ್ಯವಹಾರಗಳನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳುವ ಮೂಲಕ ಬಿಜೆಪಿಗೆ ಆರೆಸ್ಸೆಸ್‌ಗೆ ಅಗತ್ಯ ಕಡಿಮೆ ಇದೆ ಎಂದು ಹೇಳಲು ಪ್ರಯತ್ನಿಸಿದ್ದರು.
ಸೌಜನ್ಯ : telegraphindia.com