ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ; ಅರವಿಂದ್ ಕೇಜ್ರಿವಾಲ್ ವಿರುದ್ಧ ಎಫ್ಐಆರ್

Photo: X/@AAP
ಹೊಸದಿಲ್ಲಿ: 2019 ರಲ್ಲಿ ದಿಲ್ಲಿಯಲ್ಲಿ ದೊಡ್ಡ ಹೋರ್ಡಿಂಗ್ ಗಳನ್ನು ಹಾಕುವ ಮೂಲಕ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಶುಕ್ರವಾರ ಇಲ್ಲಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನೇಹಾ ಮಿತ್ತಲ್ ಅವರಿಗೆ ಸಲ್ಲಿಸಿದ ವರದಿಯಲ್ಲಿ ಪೊಲೀಸರು ಈ ವಿಷಯ ತಿಳಿಸಿದ್ದಾರೆ.
ಆಸ್ತಿ ವಿರೂಪಗೊಳಿಸುವಿಕೆ ತಡೆ ಕಾಯ್ದೆ (Prevention of Defacement of Property Act)ಯ ಉಲ್ಲಂಘನೆಯ ಆರೋಪದ ಮೇಲೆ ಮಾರ್ಚ್ 11 ರಂದು ನ್ಯಾಯಾಧೀಶರು ಪೊಲೀಸರಿಗೆ ಎಫ್‌ಐಆರ್ ದಾಖಲಿಸುವಂತೆ ಸೂಚಿಸಿದ್ದರು.
ಪೊಲೀಸರು ತನಿಖೆಗೆ ಸಮಯ ಕೋರಿದ್ದರಿಂದ ಮುಂದಿನ ವಿಚಾರಣೆಯನ್ನು ಏಪ್ರಿಲ್ 18 ಕ್ಕೆ ನ್ಯಾಯಾಲಯ ನಿಗದಿಪಡಿಸಿದೆ.
ಕೇಜ್ರಿವಾಲ್ ಜೊತೆಗೆ, ಬೃಹತ್ ಗಾತ್ರದ ಬ್ಯಾನರ್ ಗಳನ್ನು ಅಳವಡಿಸಿದ್ದಕ್ಕಾಗಿ ಮಾಜಿ ಶಾಸಕ ಗುಲಾಬ್ ಸಿಂಗ್ ಮತ್ತು ದ್ವಾರಕಾದ ಆಗಿನ ಕೌನ್ಸಿಲರ್ ನಿತಿಕಾ ಶರ್ಮಾ ವಿರುದ್ಧ ಎಫ್‌ಐಆರ್ ದಾಖಲಿಸಲು ನ್ಯಾಯಾಲಯ ಆದೇಶಿಸಿತ್ತು.
2019 ರಲ್ಲಿ ಸಲ್ಲಿಸಲಾದ ದೂರಿನಲ್ಲಿ ಕೇಜ್ರಿವಾಲ್, ಆಗಿನ ಮಟಿಯಾಲ ಶಾಸಕ ಗುಲಾಬ್ ಸಿಂಗ್ ಮತ್ತು ಆಗಿನ ದ್ವಾರಕಾ ಎ ವಾರ್ಡ್ ಕೌನ್ಸಿಲರ್ ನಿತಿಕಾ ಶರ್ಮಾ ಅವರು ಪ್ರದೇಶದ ವಿವಿಧ ಸ್ಥಳಗಳಲ್ಲಿ ಬೃಹತ್ ಗಾತ್ರದ ಹೋರ್ಡಿಂಗ್ ಗಳನ್ನು ಹಾಕುವ ಮೂಲಕ ಸಾರ್ವಜನಿಕ ಹಣವನ್ನು ಉದ್ದೇಶಪೂರ್ವಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.