ಉತ್ತರ ಪ್ರದೇಶ | ಹೋಳಿಗೆ ಪ್ರತಿರೋಧ ತೋರಿದ್ದಕ್ಕೆ ಹತ್ಯೆಯಾದ ವ್ಯಕ್ತಿಯ ಸಂಬಂಧಿಕರ ವಿರುದ್ಧವೇ ಪೊಲೀಸರಿಂದ ಪ್ರಕರಣ ದಾಖಲು!

Photo: maktoobmedia.com
ಲಕ್ನೊ: ಮಾರ್ಚ್ 15ರಂದು ಉನ್ನಾಂವ್ ಜಿಲ್ಲೆಯಲ್ಲಿ ತಮಗೆ ಹೋಳಿ ಬಣ್ಣ ಹಚ್ಚುವುದನ್ನು ಪ್ರತಿರೋಧಿಸಿದ್ದಕ್ಕಾಗಿ ಹಿಂದೂಗಳ ಗುಂಪಿನಿಂದ ಹಲ್ಲೆಗೀಡಾಗಿ ಮುಸ್ಲಿಂ ವ್ಯಕ್ತಿಯೊಬ್ಬರು ಮೃತಪಟ್ಟ ನಂತರ, ಮೃತ ವ್ಯಕ್ತಿಯ ಸಂಬಂಧಿಕರು ಸೇರಿದಂತೆ ಒಟ್ಟು 117 ಮಂದಿಯ ವಿರುದ್ಧ ಉನ್ನಾಂವ್ ಪೊಲೀಸರು ಎಫ್‌ಐಅರ್ ದಾಖಲಿಸಿಕೊಂಡಿದ್ದಾರೆ ಎಂದು maktoobmedia.com ವರದಿ ಮಾಡಿದೆ.
ಮಾರ್ಚ್ 16ರಂದು ಪೊಲೀಸರು ದಾಖಲಿಸಿಕೊಂಡಿರುವ ಎಫ್ಐಆರ್ ನಲ್ಲಿ ಮೃತ ಮುಹಮ್ಮದ್ ಶರೀಫ್ ರ ಸಂಬಂಧಿಕರಾದ ಮಿನ್ಹಾಝ್, ಸಮೀಮ್, ಶಾಬಾದ್ ಹಾಗೂ ಇನ್ನಿತರ 100 ಮಂದಿ ಅಪರಿಚಿತರು ಸೇರಿದಂತೆ ಒಟ್ಟು 117 ಮಂದಿಯನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಉನ್ನಾಂವ್ ಕೊತ್ವಾಲಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಾಜೇಶ್ ದೀಕ್ಷಿತ್ ನೀಡಿರುವ ಸ್ವಯಂಪ್ರೇರಿತ ದೂರನ್ನು ಆಧರಿಸಿ ಈ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಎಫ್ಐಆರ್ ಪ್ರಕಾರ, ಮಾರ್ಚ್ 15ರ ರಾತ್ರಿ 11.45ರ ವೇಳೆಗೆ ನಡೆದ ಶರೀಫ್ ರ ಅಂತ್ಯಕ್ರಿಯೆಯಲ್ಲಿ ಭಾರಿ ಪ್ರಮಾಣದ ಜನರು ಸೇರಿದ್ದರು. ಅವರನ್ನು ಉನ್ನಾಂವ್ ನಲ್ಲಿರುವ ಜಾಮಾ ಮಸೀದಿಯ ಸ್ಮಶಾನದಲ್ಲಿ ಹೂಳಬೇಕಿತ್ತು. ಅವರ ಅಂತ್ಯಕ್ರಿಯೆಯ ಮೆರವಣಿಗೆಯು ಲಕ್ನೊ-ಕಾನ್ಪುರ್ ಹೆದ್ದಾರಿಯನ್ನು ತಲುಪಿದಾಗ, ಕೆಲವು ಸಮಾಜ ವಿರೋಧಿ ಶಕ್ತಿಗಳು ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.
"ಐಬಿಪಿ ಚೌರಾಹಾ ಬಳಿ ರಸ್ತೆ ಮಧ್ಯದಲ್ಲಿ ಮೃತ ವ್ಯಕ್ತಿಯ ದೇಹವನ್ನಿಟ್ಟು, ಹೆದ್ದಾರಿಯನ್ನು ಬಂದ್ ಮಾಡಲಾಯಿತು. ಇದರಿಂದ ಜಿಲ್ಲಾಸ್ಪತ್ರೆ, ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದ ಪ್ರಯಾಣಿಕರಿಗೆ ಅನನುಕೂಲವಾಯಿತು. ಈ ವೇಳೆ ಜನಜಂಗುಳಿಯನ್ನು ಪ್ರಚೋದಿಸಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಮೃತ ದೇಹವನ್ನು ಹೂಳಲು ತೆಗೆದುಕೊಂಡು ಹೋಗುವುದಕ್ಕೂ ಮುನ್ನ, ಮೃತ ವ್ಯಕ್ತಿಯ ಕುಟುಂಬಸ್ಥರು ಹಾಗೂ ಸಂಬಂಧಿಕರೊಂದಿಗೆ ಮಾತನಾಡಿ, ಪರಿಸ್ಥಿತಿಯನ್ನು ಹತೋಟಿಗೆ ತಂದರು" ಎಂದೂ ಎಫ್‌ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಸಬ್ ಇನ್ಸ್‌ಪೆಕ್ಟರ್ ರಾಜೀವ್ ದೀಕ್ಷಿತ್ ನೀಡಿರುವ ಸ್ವಯಂಪ್ರೇರಿತ ದೂರನ್ನು ಆಧರಿಸಿ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಾದ 191 (2), 223, 49, 221, 285 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಮೃತ ಶರೀಫ್ ರ ಮೈದುನ ಮಿನ್ಹಾಝ್, "ಇದೆಂಥ ವ್ಯವಸ್ಥೆ ಎಂದು ನನಗೆ ಅರ್ಥವಾಗುತ್ತಿಲ್ಲ. ನಾವು ಕುಟುಂಬದ ಸದಸ್ಯರೊಬ್ಬರನ್ನು ಕಳೆದುಕೊಂಡಿದ್ದೇವೆ. ಶರೀಫ್ ರ ಸಾವಿಗೆ ಕಾರಣವಾದ ಹಲ್ಲೆಕೋರರ ವಿರುದ್ಧ ನಾವು ದೂರು ದಾಖಲಿಸಿದ್ದೇವೆ. ಆದರೆ, ಪೊಲೀಸರು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ನಮ್ಮ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ, 117 ಮಂದಿಯ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ತನಿಖಾಧಿಕಾರಿಯಾದ ಸಬ್ ಇನ್ಸ್‌ಪೆಕ್ಟರ್ ಬ್ರಜೇಶ್ ಕುಮಾರ್ ಯಾದವ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.