ಮುಸ್ಲಿಮರೊಂದಿಗೆ ಒಗ್ಗಟ್ಟಿನ ಸಂಕೇತವಾಗಿ ರಮಝಾನ್ ಉಪವಾಸ ಆಚರಿಸುವ ನ್ಯಾ. ಮಾರ್ಕಂಡೇಯ ಕಾಟ್ಜು

ಹೊಸದಿಲ್ಲಿ, ಮಾ. 28 : ರಮಝಾನ್ ತಿಂಗಳ ಉಪವಾಸ ಆಚರಿಸುತ್ತಿರುವ ಮುಸ್ಲಿಮರೊಂದಿಗೆ ಒಗ್ಗಟ್ಟಿನ ಸಂಕೇತವಾಗಿ ರಮಝಾನ್ ನ ಕೊನೆಯ ಶುಕ್ರವಾರ ( ಮಾ. 28) ದಂದು ತಾನೂ ಉಪವಾಸ ಆಚರಿಸುವುದಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಮಾರ್ಕಂಡೇಯ ಕಾಟ್ಜು ಅವರು ಹೇಳಿದ್ದಾರೆ.
ಈ ಬಗ್ಗೆ ಗುರುವಾರ ತಡರಾತ್ರಿ ಫೇಸ್ ಬುಕ್ ಪೋಸ್ಟ್ ಹಾಕಿರುವ ನ್ಯಾ. ಕಾಟ್ಜು ಅವರು " ರಮಝಾನ್ ತಿಂಗಳ ಕೊನೆಯ ಶುಕ್ರವಾರವಾದ ಮಾರ್ಚ್ 28 ರಂದು ನಾನೂ ಮುಸಲ್ಮಾನರ ಜೊತೆ ಅವರಂತೆಯೇ ಉಪವಾಸ ಆಚರಿಸುತ್ತೇನೆ. ಕಳೆದ 30 ವರ್ಷಗಳಿಂದ ನಾನು ಇದನ್ನು ಪಾಲಿಸಿಕೊಂಡು ಬಂದಿದ್ದೇನೆ. ಮುಂಜಾನೆ 4.55 ರೊಳಗೆ ಸೆಹರಿ ಉಪಹಾರ ಸೇವಿಸಿ ಬಳಿಕ ಇಫ್ತಾರ್ ನ ಸಮಯ ಸಂಜೆ 6.38 ರವರೆಗೆ ನಾನು ಏನನ್ನೂ ಸೇವಿಸುವುದಿಲ್ಲ. ವಿಶ್ವದ ಎಲ್ಲ ಮುಸ್ಲಿಮೇತರರು ಈ ದಿನ ಉಪವಾಸ ಆಚರಿಸಿ ಮುಸ್ಲಿಮ್ ಸಹೋದರರು ಹಾಗೂ ಸಹೋದರಿಯರ ಜೊತೆ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ಸೌಹಾರ್ದ ಹಾಗೂ ಸಹಬಾಳ್ವೆಯ ಪ್ರಬಲ ಪ್ರತಿಪಾದಕರಾದ ನ್ಯಾ. ಕಾಟ್ಜು ಅವರು ಕೋಮುವಾದದ ಖಟ್ಟರ್ ವಿರೋಧಿಯಾಗಿದ್ದಾರೆ. ಪ್ರಚಲಿತ ವಿದ್ಯಮಾನಗಳ ಬಗ್ಗೆ ಆಗಾಗ ಅಭಿಪ್ರಾಯ ವ್ಯಕ್ತಪಡಿಸುವ ಅವರು ತಮ್ಮ ನಿರ್ಭೀತ, ನಿಷ್ಠುರ ಹೇಳಿಕೆಗಳಿಗೆ ಪ್ರಸಿದ್ಧಿ ಪಡೆದಿದ್ದಾರೆ. ಆಗಾಗ ಅವರ ಖಡಕ್ ಹೇಳಿಕೆಗಳು ವಿವಾದ ಸೃಷ್ಟಿಸಿದರೂ ಅವರು ಆ ಬಗ್ಗೆ ತಲೆಕೆಡಿಸಿಕೊಳ್ಳದೆ ತನಗೆ ಅನಿಸಿದ್ದನ್ನು ಹಾಗೇ ಹೇಳಿ ಬಿಡುತ್ತಾರೆ.