ಕಥುವಾ ಎನ್‌ಕೌಂಟರ್: ಮೂವರು ಪೊಲೀಸರು ಹುತಾತ್ಮ, ಮೂರು ಉಗ್ರರ ಹತ್ಯೆ

PC: x.com/Preetkour
ಜಮ್ಮು: ಸೂಫಿಯಾನ್ ಪ್ರದೇಶದಲ್ಲಿ ಪೊಲೀಸರು ನಡೆಸುತ್ತಿದ್ದ ಶೋಧ ಕಾರ್ಯಾಚರಣೆ ವೇಳೆ ಗುರುವಾರ ಉಗ್ರರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಮೂವರು ಪೊಲೀಸರು ಹುತಾತ್ಮರಾಗಿದ್ದಾರೆ. ಅಷ್ಟೇ ಸಂಖ್ಯೆಯ ಉಗ್ರರು ಹತರಾಗಿದ್ದಾರೆ. ಮರಗಳ ಸಂದಿಯಲ್ಲಿ ಅಡಗಿದ್ದ ಉಗ್ರರು ಗುಂಡು ಹಾರಿಸಿದಾಗ ಮೂವರು ಪೊಲೀಸರು ಮೃತಪಟ್ಟರು ಎಂದು ಉನ್ನತ ಮೂಲಗಳು ಹೇಳಿವೆ.
ಡಿಎಸ್ಪಿ ಧೀರಜ್ ಕಟೋಚ್ ಮತ್ತು ಇಬ್ಬರು ಪೊಲೀಸರು 1 ಪ್ಯಾರಾ (ವಿಶೇಷ ಪಡೆಗಳು) ಸೈನಿಕರು ಗಾಯಗೊಂಡಿದ್ದಾರೆ. ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದ್ದು, ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಮೃತಪಟ್ಟವರಲ್ಲಿ ಹೆಡ್ ಕಾನ್ಸ್ಟೇಬಲ್ ಮತ್ತು ಇಬ್ಬರು ಪೊಲೀಸರು ಸೇರಿದ್ದಾರೆ.
ಗ್ರೆನೇಡ್ ಗಳನ್ನು ಸಿಡಿಸಿದ ಮತ್ತು ರಾಕೆಟ್ ಗಳ ಸ್ಫೋಟ ಈ ಪ್ರದೇಶದಲ್ಲಿ ಕೇಳಿಬಂತು. "ಇಡೀ ದಿನ ಗುಂಡಿನ ಚಕಮಕಿ ಮುಂದುವರಿದಿದೆ" ಎಂದು ಅಧಿಕಾರಿಯೊಬ್ಬರು ತಡರಾತ್ರಿ ಮಾಹಿತಿ ನೀಡಿದ್ದಾರೆ. ಗಾಯಗೊಂಡ ಭದ್ರತಾ ಸಿಬ್ಬಂದಿಯನ್ನು ಕಥುವಾ ಮತ್ತು ಜಮ್ಮು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ ಗಡಿಯ ಹೀರಾ ನಗರ ಸೆಕ್ಟರ್ ನ ಸನ್ಯಾಲ್ ಗ್ರಾಮದಲ್ಲಿ ರವಿವಾರ ಸಂಜೆ ನಡೆದ ಗುಂಡಿನ ಕಾಳಗದಲ್ಲಿ ತಪ್ಪಿಸಿಕೊಂಡಿದ್ದ ಗುಂಪು ಗುರುವಾರ ಪೊಲೀಸರ ಮೇಲೆ ದಾಳಿ ಮಾಡಿರಬೇಕು ಎಂದು ಶಂಕಿಸಲಾಗಿದೆ. ಸೂಫಿಯಾನ್ ಅರಣ್ಯ ಪ್ರದೇಶ ಸನ್ಯಾಲ್ ಗ್ರಾಮದಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ.