ಕಳೆದ ಐದು ವರ್ಷಗಳಲ್ಲಿ 669 ಏಶ್ಯ ಮೂಲದ ಸಿಂಹಗಳ ಮೃತ್ಯು; 2024ರಲ್ಲೇ ಅಧಿಕ: ಸರಕಾರಿ ದತ್ತಾಂಶ

Update: 2025-03-27 22:16 IST
ಕಳೆದ ಐದು ವರ್ಷಗಳಲ್ಲಿ 669 ಏಶ್ಯ ಮೂಲದ ಸಿಂಹಗಳ ಮೃತ್ಯು; 2024ರಲ್ಲೇ ಅಧಿಕ: ಸರಕಾರಿ ದತ್ತಾಂಶ

ಸಾಂದರ್ಭಿಕ ಚಿತ್ರ

  • whatsapp icon

ಹೊಸ ದಿಲ್ಲಿ: ಕಳೆದ ಐದು ವರ್ಷಗಳಲ್ಲಿ 669 ಏಶ್ಯ ಮೂಲದ ಸಿಂಹಗಳು ಮೃತಪಟ್ಟಿದ್ದರೂ, ಬೇಟೆಯಿಂದಾಗಿ ಯಾವುದೇ ಸಿಂಹದ ಸಾವು ದಾಖಲಾಗಿಲ್ಲ ಎಂದು ಗುರುವಾರ ಸರಕಾರ ತಿಳಿಸಿದೆ.

ಗುಜರಾತ್ ನಲ್ಲಿರುವ ಗೀರ್ ಅರಣ್ಯ ಮಾತ್ರ ಏಶ್ಯ ಮೂಲದ ಸಿಂಹಗಳ ನೈಸರ್ಗಿಕ ಆವಾಸ ಸ್ಥಾನವಾಗಿದೆ.

ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಪರಿಸರ ಇಲಾಖೆಯ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್, 2020ರಲ್ಲಿ 142, 2021ರಲ್ಲಿ 124, 2022ರಲ್ಲಿ 117 ಹಾಗೂ 2023ರಲ್ಲಿ 121 ಹಾಗೂ 2024ರಲ್ಲಿ 165 ಸಿಂಹಗಳು ಮೃತಪಟ್ಟಿವೆ ಎಂದು ಮಾಹಿತಿ ನೀಡಿದರು.

“ಗುಜರಾತ್ ರಾಜ್ಯ ಸರಕಾರ ವರದಿ ಮಾಡಿರುವಂತೆ, ಸಿಂಹಗಳ ಸಾವಿನ ಕಾರಣಗಳಲ್ಲಿ ವೃದ್ಧಾಪ್ಯ, ಅಸ್ವಸ್ಥತೆ, ಕಾದಾಟದಿಂದಾದ ಗಾಯಗಳು, ಮರಿ ಸಿಂಹಗಳ ಮರಣ ಪ್ರಮಾಣ, ತೆರೆದ ಬಾವಿಗಳಿಗೆ ಬೀಳುವುದು, ವಿದ್ಯುದಾಘಾತ, ಅಪಘಾತ ಇತ್ಯಾದಿ ಕಾರಣಗಳು ಸೇರಿವೆ” ಎಂದು ಅವರು ತಿಳಿಸಿದರು.

ಈ ಅವಧಿಯಲ್ಲಿ ಸಿಂಹಗಳ ಸಾವಿಗೆ ಯಾವುದೇ ಬೇಟೆಯ ಘಟನೆಗಳು ಕಾರಣವಾಗಿಲ್ಲ ಎಂದೂ ಅವರು ಹೇಳಿದರು.

ಜೂನ್ 2020ರ ಕೊನೆಯ ಅಂದಾಜಿನ ಪ್ರಕಾರ, ಗುಜರಾತ್ ನಲ್ಲಿರುವ ಏಶ್ಯ ಮೂಲದ ಸಿಂಹಗಳ ಸಂಖ್ಯೆ 674 ಆಗಿದ್ದು, 2015ರಲ್ಲಿದ್ದ 523 ಸಂಖ್ಯೆಗಿಂತ ಹೆಚ್ಚಳವಾಗಿತ್ತು.

ಇದಕ್ಕೂ ಮುನ್ನ, ಫೆಬ್ರವರಿ ತಿಂಗಳಲ್ಲಿ ಲೋಕಸಭೆಯಲ್ಲಿ ಹೇಳಿಕೆ ನೀಡಿದ್ದ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್, ಗೀರ್ ಅರಣ್ಯದಲ್ಲಿ ಸಿಂಹಗಳಿಗೆ ಸಾಕಷ್ಟು ಬೇಟೆಯ ಮೂಲಗಳಿದ್ದು, ಬೇಟೆಗೀಡಾಗುವ ಪ್ರಾಣಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ ಎಂದು ತಿಳಿಸಿದ್ದರು.

ಭಾರತದಲ್ಲಿನ ಸಿಂಹಗಳು ಭೌಗೋಳಿಕವಾಗಿ ಗೀರ್ ಅರಣ್ಯದಲ್ಲಿ ಪ್ರತ್ಯೇಕಗೊಂಡಿರುವುದರಿಂದ, ಅವನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಹಲವಾರು ವರ್ಷಗಳಿಂದ ತಜ್ಞರು ಒತ್ತಾಯಿಸುತ್ತಿದ್ದಾರೆ. ಸಾಂಕ್ರಾಮಿಕ ರೋಗಗಳು, ಬೇಟೆಗೀಡಾಗುವ ಪ್ರಾಣಿಗಳ ಸಂಖ್ಯೆಯಲ್ಲಿನ ಅನಿರೀಕ್ಷಿತ ಇಳಿಕೆ ಅಥವಾ ನೈಸರ್ಗಿಕ ವಿಕೋಪಗಳಿಂದಾಗಿ ಸಿಂಹಗಳ ಅಳಿವನ್ನು ತಪ್ಪಿಸಲು ಎರಡನೆ ಆವಾಸ ಸ್ಥಾನ ಅವಕ್ಕೆ ರಕ್ಷಣೆ ಒದಗಿಸಲಿದೆ ಎಂದು ಅವರು ಪ್ರತಿಪಾದಿಸಿದ್ದರು.

ಸೆಪ್ಟೆಂಬರ್ 2018ರಲ್ಲಿ ತಗುಲಿದ್ದ ಕ್ಯಾನೈನ್ ಡಿಸ್ಟೆಂಪರ್ ವೈರಸ್ ಸೋಂಕಿನ ಕಾರಣಕ್ಕೆ ಗೀರ್ ಆರಣ್ಯದಲ್ಲಿನ 27 ಸಿಂಹಗಳು ಮೃತಪಟ್ಟಿದ್ದವು ಹಾಗೂ ಇತರ 37 ಸಿಂಹಗಳನ್ನು ಪ್ರತ್ಯೇಕ ವಾಸದಲ್ಲಿರಿಸಲಾಗಿತ್ತು.

ಗುಜರಾತ್ ಪ್ರಧಾನ ವನ್ಯಜೀವಿ ಸಂರಕ್ಷಕರ ಕಚೇರಿಯ ದಾಖಲೆಯೊಂದರ ಪ್ರಕಾರ, 2015ರಲ್ಲಿ 22,000 ಚದರ ಕಿಮೀಯಷ್ಟಿದ್ದ ಸಿಂಹಗಳು ಹರಡಿಕೊಂಡಿದ್ದ ಪ್ರದೇಶ ವ್ಯಾಪ್ತಿಯು, 2022ರಲ್ಲಿ 30,000 ಚದರ ಕಿಮೀಗೆ ಏರಿಕೆಯಾಗಿದೆ ಎಂದು ಹೇಳಲಾಗಿತ್ತು.

ಹಾಲಿ ಇರುವ 674 ಸಿಂಹಗಳ ಪೈಕಿ, ಶೇ. 48ರಷ್ಟು ಸಿಂಹಗಳು ಒಂಬತ್ತು ಜಿಲ್ಲೆಗಳು ಹಾಗೂ 13 ಅರಣ್ಯ ಆಡಳಿತಾತ್ಮಕ ವಲಯಗಳಲ್ಲಿ ಹರಡಿಕೊಂಡಿರುವ ಸಂರಕ್ಷಿತ ಪ್ರದೇಶಗಳ ಹೊರಗೆ ಚದುರಿ ಹೋಗಿವೆ ಎಂದು 2022ರಲ್ಲಿ Nature Journalನಲ್ಲಿ ಪ್ರಕಟವಾಗಿದ್ದ ವೈಜ್ಞಾನಿಕ ವರದಿಯಲ್ಲಿ ಬಹಿರಂಗ ಪಡಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News