ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಢಿ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಕಲೆಯ ವಿವಿಧ ಬಗೆಗಳಾದ ಕವನ, ನಾಟಕ, ಸಂಗೀತ ಹಾಗೂ ವಿಡಂಬನೆಗಳು ಮನುಷ್ಯನ ಜೀವನವನ್ನು ಮತ್ತಷ್ಟು ಅರ್ಥಪೂರ್ಣವಾಗಿಸುತ್ತವೆ ಎಂದು ಶುಕ್ರವಾರ ಅಭಿಪ್ರಾಯಪಟ್ಟ ಸುಪ್ರೀಂ ಕೋರ್ಟ್, ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್‌ಗಢಿ ಪೋಸ್ಟ್ ಮಾಡಿದ್ದ ವಿಡಿಯೊ ಗೀತೆಯು ಎರಡು ವಿಭಿನ್ನ ಗುಂಪುಗಳ ಜನರ ನಡುವೆ ದ್ವೇಷವನ್ನು ಪ್ರಚೋದಿಸುತ್ತದೆ ಎಂದು ಆರೋಪಿಸಿ ಗುಜರಾತ್ ಪೊಲೀಸರು ದಾಖಲಿಸಿಕೊಂಡಿದ್ದ ಎಫ್ಐಆರ್ ಅನ್ನು ವಜಾಗೊಳಿಸಿದೆ.
ಸಂಸದ ಇಮ್ರಾನ್ ಪ್ರತಾಪ್‌ಗಢಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ "ಏ ಖೂನ್ ಕೆ ಪ್ಯಾಸೆ ಬಾತ್ ಸುನೊ.." ಎಂಬ ಗೀತೆಗೆ ಸಂಬಂಧಿಸಿದಂತೆ ಯಾವುದೇ ತಪ್ಪು ನಡೆದಿಲ್ಲ ಎಂದು ನ್ಯಾ. ಅಭಯ್ ಎಸ್ಓಕಾ ಹಾಗೂ ನ್ಯಾ. ಉಜ್ಜಲ್ ಭುಯಾನ್ ರನ್ನು ಒಳಗೊಂಡಿದ್ದ ನ್ಯಾಯಪೀಠ ಅಭಿಪ್ರಾಯ ಪಟ್ಟಿತು.
ತೀರ್ಪಿನ ಸಾರವನ್ನು ಪ್ರಕಟಿಸಿದ ಸುಪ್ರೀಂ ಕೋರ್ಟ್, ಇಂತಹ ಪ್ರಕರಣಗಳಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುವುದಕ್ಕೂ ಮುನ್ನ, ಲಿಖಿತ ಅಥವಾ ಮಾತನಾಡಿದ ಪದಗಳನ್ನು ಪರಿಶೀಲಿಸಬೇಕು ಹಾಗೂ ಅವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಾಕೀತು ಮಾಡಿತು.
ವಾಕ್ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಕಾರಣವಾದ ನಿರ್ಬಂಧಗಳನ್ನು ಹೇರಬಹುದಾದರೂ, ಅಂತಹ ನಿರ್ಬಂಧಗಳು ನಾಗರಿಕರ ಹಕ್ಕುಗಳನ್ನು ಮೊಟಕುಗೊಳಿಸುವಂಥ ಅಕಾರಣ ಹಾಗೂ ಸ್ವೇಚ್ಛೆಯಿಂದ ಕೂಡಿರಬಾರದು ಎಂದೂ ನ್ಯಾಯಪೀಠ ಒತ್ತಿ ಹೇಳಿತು.
ಇದಕ್ಕೂ ಮುನ್ನ, ಜನವರಿ 21ರಂದು ಕಾಂಗ್ರೆಸ್ ಸಂಸದ ಇಮ್ರಾನ್ ಪ್ರತಾಪ್ ಗಢಿ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಅವರಿಗೆ ಮಧ್ಯಂತರ ರಕ್ಷಣೆ ಮಂಜೂರು ಮಾಡಿತ್ತು.
ಸೌಜನ್ಯ: deccanherald.com