ಹತ್ಯೆಗೊಳಗಾಗುವ ಭೀತಿಯಿಂದ ಪ್ರಿಯಕರನ ಜೊತೆ ಪತ್ನಿಯ ವಿವಾಹ ಮಾಡಿಸಿದ ಪತಿ!

PC: x.com/ndtv
ಲಕ್ನೋ: ಉತ್ತರ ಪ್ರದೇಶದ ಮೀರತ್ ನಲ್ಲಿ ಮಹಿಳೆಯೊಬ್ಬಳು ಪ್ರಿಯಕರನ ಜತೆ ಸೇರಿ ಪತಿಯನ್ನು ಹತ್ಯೆ ಮಾಡಿ ದೇಹವನ್ನು ತುಂಡರಿಸಿ ಸಿಮೆಂಟ್ ಡ್ರಮ್ ನಲ್ಲಿ ಎಸೆದ ಘಟನೆ ಹಾಗೂ ಔರಿಯಾದಲ್ಲಿ ಜೋಡಿಯೊಂದು ಬಾಡಿಗೆ ಹಂತಕನಿಂದ ಪತಿಯ ಹತ್ಯೆ ನಡೆಸಿದ ಬೆನ್ನಲ್ಲೇ, ಸಂಭಾವ್ಯ ಅಪಾಯದಿಂದ ತಪ್ಪಿಸಿಕೊಳ್ಳುವ ಸಲುವಾಗಿ ರಾಜ್ಯದ ಮತ್ತೊಂದು ಮೂಲೆಯಲ್ಲಿ ಪತಿಯೊಬ್ಬ ಸ್ವತಃ ಮುಂದೆ ನಿಂತು ತನ್ನ ಪತ್ನಿಯನ್ನು ಪ್ರಿಯಕರನಿಗೆ ವಿವಾಹ ಮಾಡಿಕೊಟ್ಟ ಅಪರೂಪದ ಪ್ರಸಂಗ ವರದಿಯಾಗಿದೆ.
ಸಂತ ಕಬೀರ್ ನಗರದ ಕತಾರ್ ಜೋತ್ ಗ್ರಾಮದ ಬಬ್ಲೂ 2017ರಲ್ಲಿ ಗೋರಖ್ ಪುರ ಜಿಲ್ಲೆಯ ರಾಧಿಕಾ ಎಂಬಾಕೆಯನ್ನು ವಿವಾಹಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದರು. ಬಬ್ಲೂ ಮತ್ತೊಂದು ರಾಜ್ಯದಲ್ಲಿ ಕೂಲಿ ಕಾರ್ಮಿಕನಾಗಿದ್ದ. ಈ ಮಧ್ಯೆ ತನ್ನ ಪತ್ನಿ ವಿಕಾಸ್ ಎಂಬಾತನ ಜತೆ ಸುಮಾರು ಒಂದೂವರೆ ವರ್ಷದಿಂದ ಪ್ರೇಮಸಂಬಂಧ ಹೊಂದಿರುವುದು ಆತನಿಗೆ ತಿಳಿಯಿತು. ಪತ್ನಿಗೆ ಮಾಹಿತಿ ನೀಡದೇ ಗ್ರಾಮಕ್ಕೆ ಮರಳಿ ಈ ವಿಷಯವನ್ನು ದೃಢಪಡಿಸಿಕೊಳ್ಳುವ ಪ್ರಯತ್ನ ಮಾಡಿದ.
ಗ್ರಾಮಸ್ಥರು ಇದನ್ನು ದೃಢಪಡಿಸಿದ ಬಳಿಕ ಪತ್ನಿಯನ್ನು ಬೈಯದೇ ಅಥವಾ ವಾದವನ್ನೂ ಮಾಡದೇ, ಗ್ರಾಮದ ಹಿರಿಯರಿಗೆ ಈ ಪ್ರೇಮಸಂಬಂಧದ ಬಗ್ಗೆ ಮಾಹಿತಿ ನೀಡಿ, ಆಕೆ ತನ್ನ ಪ್ರಿಯಕರನ ಜತೆ ವಿವಾಹವಾಗಲು ವ್ಯವಸ್ಥೆ ಮಾಡುವಂತೆ ಕೋರಿದ. ಶಿವ ದೇವಸ್ಥಾನದಲ್ಲಿ ತನ್ನ ಪತ್ನಿಯ ವಿವಾಹ ಕಾರ್ಯವನ್ನು ನೆರವೇರಿಸಿದ ಬಬ್ಲೂ, ಈ ವಿವಾಹಕ್ಕೆ ಸಾಕ್ಷಿಯಾಗಿ ಕಾನೂನು ಪ್ರಕ್ರಿಯೆಯನ್ನೂ ಪೂರ್ಣಗೊಳಸಿದ.
ರಾಧಿಕಾ ಜತೆಗಿನ ವೈವಾಹಿಕ ಜೀವನದಲ್ಲಿ ಹೊಂದಿದ ಇಬ್ಬರು ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನೂ ಬಬ್ಲೂ ವಹಿಸಿಕೊಂಡಿದ್ದಾನೆ. ಮಕ್ಕಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ರಾಧಿಕಾ ತನ್ನ ಪ್ರಿಯಕರ ವಿಕಾಸ್ ಜತೆ ವಿವಾಹವಾಗುತ್ತಿರುವುದು ವಿಡಿಯೊದಲ್ಲಿ ಕಾಣಿಸುತ್ತಿದೆ. ಪರಸ್ಪರ ಹಾರ ವಿನಿಮಯದ ಬಳಿಕ ರಾಧಿಕಾ ಹಣೆಗೆ ವಿಕಾಸ್ ತಿಲಕವಿಡುತ್ತಿರುವ, ನೂತನ ಜೋಡಿಯ ಜತೆ ಬಬ್ಲೂ ಫೋಟೊ ತೆಗೆಸಿಕೊಂಡ ದೃಶ್ಯವೂ ಸೆರೆಯಾಗಿದೆ.
ಈ ಅಪರೂಪದ ಘಟನೆ ಬಗ್ಗೆ ಕೇಳಿದಾಗ "ನನಗೆ ಯಾವುದೇ ಜೀವಾಪಾಯ ಆಗದಂತೆ ಮುನ್ನೆಚ್ಚರಿಕೆಯಾಗಿ ಈ ವಿವಾಹ ಮಾಡಿಸಲು ನಾನು ಮುಂದಾದೆ. ಇತ್ತೀಚಿನ ದಿನಗಳಲ್ಲಿ ಪತ್ನಿಯರು ಪತಿಯಂದಿರನ್ನು ಕೊಲ್ಲುವ ಘಟನೆಗಳನ್ನು ನಾವು ಕಾಣುತ್ತೇವೆ.. ಮೀರತ್ ನಲ್ಲಿ ನಡೆದ ಘಟನೆಯನ್ನು ನೋಡಿದ ಬಳಿಕ, ಪತ್ನಿಯನ್ನು ಆಕೆಯ ಪ್ರಿಯಕರನ ಜತೆ ವಿವಾಹ ಮಾಡಿಸಿ ಎಲ್ಲರೂ ಶಾಂತಿಯಿಂದ ಜೀವಿಸಲು ನಿರ್ಧರಿಸಿದೆ" ಎಂದು ಬಬ್ಲೂ ಉತ್ತರಿಸಿದ್ದಾರೆ.