ಉತ್ತರಾಖಂಡ | ದೇವಸ್ಥಾನದಲ್ಲಿ ದಲಿತ ಯುವತಿಯ ವಿವಾಹಕ್ಕೆ ಅಡ್ಡಿ : ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ (PTI)
ಡೆಹ್ರಾಡೂನ್: ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪದಡಿ ಅರ್ಚಕ ಮತ್ತು ಆತನ ಇಬ್ಬರು ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೌರಿ ಜಿಲ್ಲೆಯ ಮಣಿಯರ್ಸ್ಯುನ್ ಪಟ್ಟಿ ಪ್ರದೇಶದ ಕಥೂರ್ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಯುವತಿಯ ವಿವಾಹಕ್ಕೆ ಬ್ರಾಹ್ಮಣ ಸಮುದಾಯದ ಸದಸ್ಯರು ಅಡ್ಡಿಪಡಿಸಿದರು. ಪರಿಶಿಷ್ಟ ಜಾತಿ ಯುವತಿಯ ವಿವಾಹವನ್ನು ದೇವಸ್ಥಾನದಲ್ಲಿ ನಡೆಸುತ್ತಾರೆಂದು ದೇವಸ್ಥಾನದ ಅರ್ಚಕರು ಯಜ್ಞಶಾಲೆಗೆ ಬೀಗ ಹಾಕಿರುವ ಆರೋಪ ಕೇಳಿ ಬಂದಿದೆ. ಈ ಘಟನೆಯು ಜಾತಿ ತಾರತಮ್ಯದ ಬಗ್ಗೆ ಗಮನಾರ್ಹ ಕಳವಳವನ್ನು ಹುಟ್ಟುಹಾಕಿದೆ ಮತ್ತು ಸಮುದಾಯದ ಸದಸ್ಯರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.
ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಜಾತಿ ತಾರತಮ್ಯದ ಬಗ್ಗೆ ಕಳವಳ ಮತ್ತು ಪ್ರಕರಣದ ಸೂಕ್ಷ್ಮತೆಯನ್ನು ಅರಿತುಕೊಂಡು ತನಿಖೆಗಾಗಿ ಪೊಲೀಸರಿಗೆ ಪ್ರಕರಣವನ್ನು ವರ್ಗಾಯಿಸಿದರು.
ಪೋಲೀಸ್ ಮೂಲಗಳ ಪ್ರಕಾರ, ಕಾತೂರು ಗ್ರಾಮದ ನಿವಾಸಿ ನಕುಲ್ ದಾಸ್ ಮಗಳ ಮದುವೆಯ ಸಂದರ್ಭದಲ್ಲಿ ನಮ್ಮ ಕುಟುಂಬ ಜಾತಿ ತಾರತಮ್ಯವನ್ನು ಎದುರಿಸಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ಗೆ ದೂರು ಸಲ್ಲಿಸಿದರು. ʼನನ್ನ ಮಗಳ ನಿಶ್ಚಿತಾರ್ಥವನ್ನು ಬೇಡಗಾಂವ್‌ನ ಯುವಕನೊಂದಿಗೆ ಏರ್ಪಡಿಸಲಾಗಿತ್ತು. ಹಣಕಾಸಿನ ತೊದಂದರೆಯಿಂದ ಸಂಗುಡ ಬಿಲ್ಖೇತ್‌ನಲ್ಲಿರುವ ಆದಿಶಕ್ತಿ ಮಾ ಭುವನೇಶ್ವರಿ ದೇವಸ್ಥಾನದಲ್ಲಿ ವಿವಾಹವನ್ನು ನಡೆಸಲು ನಿರ್ಧರಿಸಿದೆವು. ನಾವು ದೇವಾಲಯದ ಬೀಗವನ್ನು ತೆರೆಯಲು ವಿನಂತಿಸಿದಾಗ, ನಮಗೆ ಜಾತಿಯನ್ನು ಉಲ್ಲೇಖಿಸಿ ಅವಾಚ್ಯವಾಗಿ ನಿಂದಿಸಲಾಯಿತುʼ ಎಂದು ನಕುಲ್ ದಾಸ್ ಆರೋಪಿಸಿದರು.
ಪೊಲೀಸರ ಮಧ್ಯಪ್ರವೇಶದ ಬಳಿಕ ದೇವಸ್ಥಾನದ ಬಾಗಿಲು ತೆರೆಯಲಾಗಿದೆ. ಮದುವೆ ನಿಗದಿತ ರೀತಿಯಲ್ಲಿ ನಡೆಸಲು ಅನುವು ಮಾಡಿಕೊಡಲಾಗಿದೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ.ಆಶಿಶ್ ಚೌಹಾಣ್, ಈ ಕುರಿತು ಹೆಚ್ಚಿನ ತನಿಖೆಗೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಹೇಳಿದರು.