ರೈತ ನಾಯಕ ದಲ್ಲೇವಾಲ್ ಅಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ : ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ ಪಂಜಾಬ್ ಸರಕಾರ

ಜಗಜೀತ್ ಸಿಂಗ್ ದಲ್ಲೇವಾಲ್ | PC : PTI
ಹೊಸದಿಲ್ಲಿ: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಕೆ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತ ನಾಯಕ ಜಗಜೀತ್ ಸಿಂಗ್ ದಲ್ಲೇವಾಲ್, ಶುಕ್ರವಾರ ಬೆಳಗ್ಗೆ ನೀರು ಸೇವಿಸುವ ಮೂಲಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದಾರೆ ಎಂದು ಪಂಜಾಬ್ ಸರಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ಖನೌರಿ ಹಾಗೂ ಶಂಭು ಗಡಿಗಳ ಬಳಿ ಪ್ರತಿಭಟಿಸುತ್ತಿದ್ದ ಎಲ್ಲ ರೈತರನ್ನು ಅಲ್ಲಿಂದ ಚದುರಿಸಲಾಗಿದೆ. ಎಲ್ಲ ಮುಚ್ಚಿದ್ದ ರಸ್ತೆಗಳು ಹಾಗೂ ಹೆದ್ದಾರಿಗಳನ್ನು ತೆರೆಯಲಾಗಿದೆ ಎಂದು ಪಂಜಾಬ್ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್, ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಎನ್.ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡಿದ್ದ ನ್ಯಾಯಪೀಠಕ್ಕೆ ತಿಳಿಸಿದರು.
ಈ ವೇಳೆ ದಲ್ಲೇವಾಲ್‌ರ ಪ್ರಯತ್ನಗಳನ್ನು ಶ್ಲಾಘಿಸಿದ ನ್ಯಾಯಪೀಠ, ಅವರೊಬ್ಬ ಯಾವುದೇ ರಾಜಕೀಯ ಕಾರ್ಯಸೂಚಿಗಳಿಲ್ಲದ ನೈಜ ರೈತ ನಾಯಕ ಎಂದು ಬಣ್ಣಿಸಿತು.
ʼಕೆಲವರಿಗೆ ರೈತರ ಕುಂದುಕೊರತೆಗಳು ಬಗೆಹರಿಯುವುದು ಬೇಕಿಲ್ಲ ಎಂಬುದು ನಮಗೆ ತಿಳಿದಿದೆ. ನಾವು ಗೋಪುರದಲ್ಲಿ ಕುಳಿತಿಲ್ಲ. ನಮಗೆ ಎಲ್ಲವೂ ತಿಳಿದಿದೆʼ ಎಂದು ಹೇಳಿದ ನ್ಯಾಯಪೀಠ, ಪ್ರತಿಭಟನಾ ಸ್ಥಳದಲ್ಲಿನ ಸಧ್ಯದ ಪರಿಸ್ಥಿತಿಯ ಕುರಿತು ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಪಂಜಾಬ್ ಹಾಗೂ ಹರ್ಯಾಣ ಸರಕಾರಗಳಿಗೆ ಸೂಚಿಸಿತು. ರೈತರ ಕುಂದುಕೊರತೆಗಳತ್ತ ಗಮನ ಹರಿಸುವಂತೆ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದ ಉನ್ನತಾಧಿಕಾರ ಸಮಿತಿಗೆ ಸುಪ್ರೀಂ ಕೋರ್ಟ್ ಸೂಚಿಸಿದ್ದು, ಈ ಕುರಿತು ಪೂರಕ ವಸ್ತುಸ್ಥಿತಿ ವರದಿ ಸಲ್ಲಿಸುವಂತೆ ಆದೇಶಿಸಿತು.
ಇದಲ್ಲದೆ ದಲ್ಲೇವಾಲ್‌ರಿಗೆ ವೈದ್ಯಕೀಯ ನೆರವು ನೀಡುವಂತೆ ನೀಡಿದ್ದ ಆದೇಶವನ್ನು ಉಲ್ಲಂಘಿಸಿದ ಆರೋಪದ ಮೇಲೆ ಪಂಜಾಬ್ ಮುಖ್ಯ ಕಾರ್ಯದರ್ಶಿ ಹಾಗೂ ಪಂಜಾಬ್ ಪೊಲೀಸ್ ಮಹಾ ನಿರ್ದೇಶಕರ ವಿರುದ್ಧ ದಾಖಲಿಸಿಕೊಂಡಿದ್ದ ನ್ಯಾಯಾಂಗ ನಿಂದನೆ ಪ್ರಕರಣವನ್ನು ಸುಪ್ರೀಂ ಕೋರ್ಟ್ ಕೈಬಿಟ್ಟಿತು.