ಸಚಿವರು ತಮ್ಮ ಮಾತುಗಳ ಮೇಲೆ ಎಚ್ಚರಿಕೆ ವಹಿಸಬೇಕು: ದೇವೇಂದ್ರ ಫಡ್ನವಿಸ್

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (PTI)
ಮುಂಬೈ: ತಮ್ಮ ಹೇಳಿಕೆಗಳಿಂದ ಸಮಾಜದಲ್ಲಿ ಹಗೆತನ ಬೆಳೆಯದಂತೆ ನೋಡಿಕೊಳ್ಳಬೇಕು ಎಂದು ಬುಧವಾರ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಕಿವಿಮಾತು ಹೇಳಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಬಿಜೆಪಿಯ ಹಿರಿಯ ನಾಯಕ ದಿ. ಅಟಲ್ ಬಿಹಾರಿ ವಾಜಪೇಯಿ ನೀಡಿದ್ದ ಸಲಹೆಯಂತೆ ರಾಜಧರ್ಮವನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ.
ಇತ್ತೀಚೆಗೆ ನಾಗ್ಪುರದಲ್ಲಿ ಭುಗಿಲೆದ್ದ ಹಿಂಸಾಚಾರ ಹಾಗೂ ಬಿಜೆಪಿ ಸಚಿವ ನಿತೇಶ್ ರಾಣೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಅವರು ಯಾರದೇ ಹೆಸರನ್ನು ಉಲ್ಲೇಖಿಸದೆ ಮೇಲಿನಂತೆ ಸೂಚಿಸಿದ್ದಾರೆ.
ಇದಕ್ಕೂ ಮುನ್ನ, '2025ನೇ ವರ್ಷದ ಲೋಕಮತ ಮಹಾರಾಷ್ಟ್ರ ವ್ಯಕ್ತಿ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎನ್‌ಸಿಪಿ (ಎಸ್‌ಪಿ) ನಾಯಕ ಜಯಂತ್ ಪಾಟೀಲ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಸಂದರ್ಶನ ನಡೆಸಿದರು.
ಈ ವೇಳೆ ಮಾತನಾಡಿದ ದೇವೇಂದ್ರ ಫಡ್ನವಿಸ್, "ಸಚಿವರಾಗಿ ನಾವು ಕೆಲವು ನಿರ್ದಿಷ್ಟ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ. ಒಂದು ಸಂದರ್ಭದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ರಾಜಧರ್ಮ ಪಾಲಿಸುವುದು ಆಡಳಿತಗಾರರ ಕರ್ತವ್ಯ ಎಂದು ಹೇಳಿದ್ದರು. ಹೀಗಾಗಿ, ನಾವು ನಮ್ಮ ವೈಯಕ್ತಿಕ ಅಭಿಪ್ರಾಯಗಳು, ಇಷ್ಟಾನಿಷ್ಟಗಳನ್ನು ಬದಿಗಿಡಬೇಕು. ನಾವು ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದು, ನಾವು ಯಾವ ವ್ಯಕ್ತಿಗೂ ಅನ್ಯಾಯವೆಸಗಬಾರದು ಎಂಬ ಜವಾಬ್ದಾರಿಯನ್ನು ಸಂವಿಧಾನ ನಮಗೆ ವಹಿಸಿದೆ" ಎಂದು ಅಭಿಪ್ರಾಯ ಪಟ್ಟರು.
ಸಚಿವ ನಿತೇಶ್ ರಾಣೆ ನೀಡಿದ್ದ ವಿವಾದಾತ್ಮಕ ಹೇಳಿಕೆ ಕುರಿತು ಮಂಗಳವಾರ ವಿರೋಧ ಪಕ್ಷಗಳು ಶಾಸಕಾಂಗ ಸಂಕೀರ್ಣದ ಬಳಿ ಪ್ರತಿಭಟನೆ ನಡೆಸಿದ್ದವು.
ಈ ಹೇಳಿಕೆಯನ್ನು ಉಲ್ಲೇಖಿಸಿ, ಕೆಲವು ಸಚಿವರು ನಿರ್ದಿಷ್ಟ ಸಮುದಾಯವೊಂದರ ಬಗ್ಗೆ ಹೇಳಿಕೆ ನೀಡುತ್ತಿರುವ ಕುರಿತು ಜಯಂತ್ ಪಾಟೀಲ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೇವೇಂದ್ರ ಫಡ್ನವಿಸ್, "ಸಚಿವರು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಹಾಗೂ ತಮ್ಮ ಹೇಳಿಕೆಗಳಿಂದ ಸಮಾಜದಲ್ಲಿ ಯಾವುದೇ ಹಗೆತನ ಬೆಳೆಯದಂತೆ ಖಾತರಿ ಪಡಿಸಬೇಕು. ಕೆಲವು ವೇಳೆ ಯುವ ಸಚಿವರು ಕೆಲ ಹೇಳಿಕೆ ನೀಡುತ್ತಾರೆ. ಇಂತಹ ಸಂದರ್ಭಗಳಲ್ಲಿ ನಾನು ಅವರೊಂದಿಗೆ ಮಾತುಕತೆ ನಡೆಸಿ, ನೀವು ಸಚಿವರಾಗಿದ್ದು, ನಿಮ್ಮ ಮಾತುಗಳ ಮೇಲೆ ನಿಯಂತ್ರಣ ಹೊಂದಿರಬೇಕು ಎಂದು ಅವರಿಗೆ ಕಿವಿಮಾತು ಹೇಳಿದ್ದೇನೆ" ಎಂದು ಹೇಳಿದ್ದಾರೆ.
ಸೋಮವಾರ, ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮುಘಲ್ ದೊರೆ ಔರಂಗಜೇಬ್ ನ ಸಮಾಧಿಯನ್ನು ತೆರವುಗೊಳಿಸಬೇಕು ಎಂದು ವಿಎಚ್‌ಪಿ ಹಾಗೂ ಬಜರಂಗ ದಳ ನೇತೃತ್ವದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ತವರಾದ ನಾಗ್ಪುರದಲ್ಲಿ ಗುಂಪು ಗಲಭೆ ಸಂಭವಿಸಿ, ವ್ಯಾಪಕ ಪ್ರಮಾಣದ ಆಸ್ತಿಪಾಸ್ತಿಗಳು ಹಾನಿಗೀಡಾಗಿದ್ದವು. ಪೊಲೀಸ್ ಸಿಬ್ಬಂದಿಗಳೂ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಈ ಹಿಂಸಾಚಾರದಲ್ಲಿ ಗಾಯಗೊಂಡಿದ್ದರು.