ಸೆನ್ಸಾರ್‌ಶಿಪ್: ಕೇಂದ್ರದ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಎಲಾನ್ ಮಾಸ್ಕ್ ನೇತೃತ್ವದ ʼಎಕ್ಸ್ʼ

Update: 2025-03-20 16:23 IST
ಸೆನ್ಸಾರ್‌ಶಿಪ್: ಕೇಂದ್ರದ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಎಲಾನ್ ಮಾಸ್ಕ್ ನೇತೃತ್ವದ ʼಎಕ್ಸ್ʼ
  • whatsapp icon

ಬೆಂಗಳೂರು : ಯುಎಸ್ ಬಿಲಿಯನೇರ್ ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ದೈತ್ಯ 'ಎಕ್ಸ್' ಭಾರತ ಸರಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ʼಕಾನೂನುಬಾಹಿರ ನಿಯಂತ್ರಣʼ ಮತ್ತು ಅನಿಯಂತ್ರಿತ ಸೆನ್ಸಾರ್‌ಶಿಪ್‌ ಪ್ರಶ್ನಿಸಿ ಮೊಕದ್ದಮೆ ಹೂಡಿದೆ.

ಮೊಕದ್ದಮೆಯಲ್ಲಿ ʼಎಕ್ಸ್ʼ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕುರಿತ ಕೇಂದ್ರದ ವ್ಯಾಖ್ಯಾನದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ವಿಶೇಷವಾಗಿ ಸೆಕ್ಷನ್ 79, ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲಂಘಿಸುತ್ತದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂದು ʼಎಕ್ಸ್ʼ ಹೇಳಿಕೊಂಡಿದೆ. ಸೆಕ್ಷನ್ 69Aಯಲ್ಲಿ ವಿವರಿಸಿರುವ ರಚನಾತ್ಮಕ ಕಾನೂನು ಪ್ರಕ್ರಿಯೆಗೆ ಬದಲಾಗಿ ವಿಷಯವನ್ನು ನಿರ್ಬಂಧಿಸಲು ಸರಕಾರ ಈ ಸೆಕ್ಷನ್‌ಗಳನ್ನು ಬಳಸುತ್ತಿದೆ ಎಂದು ಆರೋಪಿಸಲಾಗಿದೆ.

ಈ ವಿಧಾನವು ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ 2015ರ ತೀರ್ಪಿಗೆ ವಿರುದ್ಧವಾಗಿದೆ ಎಂದು ʼಎಕ್ಸ್ʼ ಪ್ರತಿಪಾದಿಸಿದೆ. ಸರಿಯಾದ ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಅಥವಾ ಸೆಕ್ಷನ್ 69A ಅಡಿಯಲ್ಲಿ ಕಾನೂನುಬದ್ಧವಾಗಿ ವ್ಯಾಖ್ಯಾನಿಸಲಾದ ಮಾರ್ಗದ ಮೂಲಕ ಮಾತ್ರ ವಿಷಯವನ್ನು ನಿರ್ಬಂಧಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ, ಸೆಕ್ಷನ್ 79(3)(b) ನ್ಯಾಯಾಲಯದ ಆದೇಶ ಅಥವಾ ಸರಕಾರ ನೋಟಿಸ್ ನೀಡಿದ ಬಳಿಕ ʼಕಾನೂನುಬಾಹಿರ ವಿಷಯʼವನ್ನು ಆನ್‌ಲೈನ್‌ ಪ್ಲಾಟ್‌ಫಾರ್ಮ್‌ಗಳು ತೆಗೆದು ಹಾಕುವುದು ಕಡ್ಡಾಯವಾಗಿದೆ. ಸಾಮಾಜಿಕ ಮಾಧ್ಯಮ ವೇದಿಕೆ 36 ಗಂಟೆಗಳ ಒಳಗೆ ಸೂಚನೆ ಅನುಸರಿಸಲು ವಿಫಲವಾದರೆ,ಕಾನೂನು ಕ್ರಮವನ್ನು ಎದುರಿಸಬಹುದು.

ಇದಲ್ಲದೆ ʼಎಕ್ಸ್ʼ ಸರಕಾರದ ಸಹ್ಯೋಗ್ ಪೋರ್ಟಲ್‌ಗೆ ವಿರೋಧ ವ್ಯಕ್ತಪಡಿಸಿದೆ. ನ್ಯಾಯಾಂಗದ ಮೇಲ್ವಿಚಾರಣೆಯಿಲ್ಲದೆ ಆನ್‌ಲೈನ್‌ ವಿಚಾರಗಳನ್ನು ನಿಯಂತ್ರಿಸಲು ಸರಕಾರದ ಮತ್ತೊಂದು ಪ್ರಯತ್ನವಾಗಿದೆ ಎಂದು ಮೊಕದ್ದಮೆಯಲ್ಲಿ ವಾದಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News