ಛತ್ತೀಸ್ ಗಢ | ಭದ್ರತಾ ಪಡೆ-ಮಾವೋವಾದಿಗಳ ನಡುವೆ ಗುಂಡಿನ ಚಕಮಕಿ : ಓರ್ವ ಯೋಧ ಹುತಾತ್ಮ, 18 ಮಾವೋದಿಗಳ ಹತ್ಯೆ

ಸಾಂದರ್ಭಿಕ ಚಿತ್ರ (PTI)
ದಾಂತೇವಾಡ (ಛತ್ತೀಸ್‌ಗಢ): ಗುರುವಾರ ದಕ್ಷಿಣ ಛತ್ತೀಸ್‌ಗಢದ ದಾಂತೇವಾಡ ಮತ್ತು ಬಿಜಾಪುರ್ ಜಿಲ್ಲೆಗಳ ಗಡಿಯಲ್ಲಿರುವ ಕಾಡಿನಲ್ಲಿ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದು, 18 ಮಂದಿ ಮಾವೋವಾದಿಗಳು ಹತ್ಯೆಗೀಡಾಗಿದ್ದಾರೆ.
ಅಬುಝ್‌ಮಡ್‌ನಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್ ಒಂದರಲ್ಲಿ ನಕ್ಸಲೀಯರು ಸುಧಾರಿತ ಸ್ಫೋಟಕ ಸಾಧನವನ್ನು ಸ್ಫೋಟಿಸಿದರಾದರೂ, ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
ದಾಂತೇವಾಡ ಗಡಿ ಬಳಿಯಿರುವ ಬಿಜಾಪುರ್ ಜಿಲ್ಲೆಯ ಗಂಗಲೂರ್ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳು ಅಡಗಿಕೊಂಡಿದ್ದಾರೆ ಎಂಬ ಗುಪ್ತಚರ ದಳದ ಖಚಿತ ಸುಳಿವನ್ನಾಧರಿಸಿ, ಗುರುವಾರ ಬೆಳಗ್ಗೆ ಸುಮಾರು 7 ಗಂಟೆಗೆ ಭದ್ರತಾ ಪಡೆಗಳು ಬಂಡುಕೋರ ನಿಗ್ರಹ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳ ನಡುವೆ ಗಂಟೆಗಟ್ಟಲೆ ಗುಂಡಿನ ಚಕಮಕಿ ನಡೆದಿದೆ ಎಂದು ಬಸ್ತಾರ್ ವಲಯದ ಪೊಲೀಸ್ ಮಗಾನಿರೀಕ್ಷಕ ಸುಂದರ್ ರಾಜ್ ಪಿ. ತಿಳಿಸಿದ್ದಾರೆ.
"ಈ ಎನ್‌ಕೌಂಟರ್‌ನಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದು, 18 ಮಾವೋವಾದಿಗಳು ಹತರಾಗಿದ್ದಾರೆ. ಘಟನಾ ಸ್ಥಳದಿಂದ ಸ್ಫೋಟಕ ಸಾಮಗ್ರಿಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ" ಎಂದೂ ಅವರು ತಿಳಿಸಿದ್ದಾರೆ.