ಬೆಂಗಳೂರು | ಅಮೆರಿಕದ ಉದ್ಯಮಿ ಜಾರ್ಜ್ ಸೊರೊಸ್ ನೇತೃತ್ವದ ಸಂಸ್ಥೆಯ ಮೇಲೆ ED ದಾಳಿ

ಬೆಂಗಳೂರು : ಅಮೆರಿಕದ ಬಿಲಿಯನೇರ್ ಜಾರ್ಜ್ ಸೊರೊಸ್ ಅವರ ಓಪನ್ ಸೊಸೈಟಿ ಫೌಂಡೇಶನ್ಸ್(OSF)ಗೆ ಸಂಬಂಧಿಸಿದ ಬೆಂಗಳೂರಿನ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ವಿದೇಶಿ ವಿನಿಮಯ ನಿಯಮಗಳ ಉಲ್ಲಂಘನೆಯ ತನಿಖೆಯ ಭಾಗವಾಗಿ ಶೋಧಗಳನ್ನು ನಡೆಸಲಾಯಿತು ಎಂದು ಅಧಿಕೃತ ಮೂಲಗಳು ತಿಳಿಸಿರುವ ಬಗ್ಗೆ indiatoday ವರದಿ ಮಾಡಿದೆ. ಈ ಪ್ರಕರಣವು OSFನಿಂದ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು FEMA ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕೆಲವು ಫಲಾನುಭವಿಗಳು ಹಣವನ್ನು ಬಳಸಿಕೊಂಡಿರುವುದಕ್ಕೆ ಸಂಬಂಧಿಸಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಜಾರ್ಜ್ ಸೊರೊಸ್ 1979ರಲ್ಲಿ ಓಪನ್ ಸೊಸೈಟಿ ಫೌಂಡೇಶನ್(ಒಎಸ್ಎಫ್) ಸ್ಥಾಪಿಸಿದರು. ಈ ಸಂಸ್ಥೆಯ ಮೂಲಕ ಸೊರೊಸ್ ಜಗತ್ತಿನಾದ್ಯಂತ ವಿವಿಧ ಉದ್ದೇಶಗಳಿಗಾಗಿ 32 ಬಿಲಿಯನ್ ಡಾಲರ್‌ಗೂ ಹೆಚ್ಚಿನ ಮೊತ್ತವನ್ನು ದಾನವಾಗಿ ನೀಡಿದ್ದಾರೆ. ಒಎಸ್ಎಫ್ ಸಂಸ್ಥೆ ಜಗತ್ತಿನಲ್ಲಿ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಮತ್ತು ಸಾಮಾಜಿಕ ನ್ಯಾಯವನ್ನು ಬೆಂಬಲಿಸಲು ಕಾರ್ಯ ನಿರ್ವಹಿಸುತ್ತದೆ. OSF 1999ರಿಂದ ಭಾರತದಲ್ಲಿ ಕಾರ್ಯಚರಿಸುತ್ತಿದೆ. ಭಾರತೀಯ ಸಂಸ್ಥೆಗಳಲ್ಲಿ ಅಧ್ಯಯನ ಮತ್ತು ಸಂಶೋಧನೆಯನ್ನು ಮುಂದುವರಿಸಲು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಫೆಲೋಶಿಪ್‌ಗಳನ್ನು ನೀಡುತ್ತಿದೆ.
ಜಾರ್ಜ್ ಸೊರೊಸ್ ಅವರು ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಇತ್ತೀಚೆಗೆ ಬಿಜೆಪಿ ಆರೋಪಿಸಿತ್ತು.