ನಾಗ್ಪುರ ಘರ್ಷಣೆ : ಮಹಲ್, ಕೊತ್ವಾಲಿ ಸೇರಿದಂತೆ ಹಲವೆಡೆ ಕರ್ಪ್ಯೂ, 48 ಮಂದಿ ಪೊಲೀಸ್ ವಶಕ್ಕೆ

Update: 2025-03-18 11:41 IST
ನಾಗ್ಪುರ ಘರ್ಷಣೆ : ಮಹಲ್, ಕೊತ್ವಾಲಿ ಸೇರಿದಂತೆ ಹಲವೆಡೆ ಕರ್ಪ್ಯೂ, 48 ಮಂದಿ ಪೊಲೀಸ್ ವಶಕ್ಕೆ

photo |  hindustantimes

  • whatsapp icon

ಮುಂಬೈ : ನಾಗ್ಪುರದ ಮಹಲ್ ಪ್ರದೇಶದಲ್ಲಿ ಎರಡು ಗುಂಪುಗಳ ನಡುವಿನ ಘರ್ಷಣೆಗೆ ಸಂಬಂಧಿಸಿ 48 ಮಂದಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ ಮತ್ತು ಕರ್ಪ್ಯೂ ಜಾರಿಗೊಳಿಸಲಾಗಿದೆ.

ಔರಂಗಜೇಬ್ ಅವರ ಸಮಾಧಿಯನ್ನು ತೆಗೆದುಹಾಕುವಂತೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯ ಸಂದರ್ಭ ಧರ್ಮ ಗ್ರಂಥವನ್ನು ದಹಿಸಲಾಗಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ನಾಗ್ಪುರದ ಮಹಲ್ ಪ್ರದೇಶದಲ್ಲಿ ಎರಡು ಗುಂಪುಗಳ ನಡುವೆ ಸೋಮವಾರ ರಾತ್ರಿ ಘರ್ಷಣೆ ಸಂಭವಿಸಿದೆ. ಪಿಟಿಐ ಪ್ರಕಾರ, ಮಹಲ್‌ನ ಚಿಟ್ನಿಸ್ ಪಾರ್ಕ್ ಪ್ರದೇಶದಲ್ಲಿ ರಾತ್ರಿ 7:30ರ ಸುಮಾರಿಗೆ ಘರ್ಷಣೆ ಪ್ರಾರಂಭವಾಯಿತು. ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಯಿತು, ಆರು ನಾಗರಿಕರು ಮತ್ತು ಮೂವರು ಅಧಿಕಾರಿಗಳು ಈ ವೇಳೆ ಗಾಯಗೊಂಡರು.

ಘರ್ಷಣೆ ನಂತರ ಕೊತ್ವಾಲಿ ಮತ್ತು ಗಣೇಶಪೇಟ್ ಪ್ರದೇಶಕ್ಕೆ ಹರಡಿತು. ಸುಮಾರು 1,000 ಜನರು ಕಲ್ಲು ತೂರಾಟ, ವಿಧ್ವಂಸಕತೆ ಕೃತ್ಯದಲ್ಲಿ ತೊಡಗಿದರು. ಅನೇಕ ವಾಹನಗಳು ಮತ್ತು ಮನೆಗಳಿಗೆ ಹಾನಿ ಮಾಡಿದರು. ಹಿಂಸಾಚಾರ ರಾತ್ರಿ 8.30ರ ವೇಳೆ ಮತ್ತಷ್ಟು ತಾರಕಕ್ಕೇರಿ ನಾಗ್ಪುರದ ಹಂಸಪುರಿ ಪ್ರದೇಶಕ್ಕೆ ಹರಡಿತು. ಅಲ್ಲಿ ಅಪರಿಚಿತ ವ್ಯಕ್ತಿಗಳು ಅಂಗಡಿಗಳನ್ನು ಧ್ವಂಸಗೊಳಿಸಿದರು, ವಾಹನಗಳಿಗೆ ಬೆಂಕಿ ಹಚ್ಚಿದರು. ಮಹಲ್‌ನಲ್ಲಿ ಮತ್ತೆ ಕಲ್ಲು ತೂರಾಟ ನಡೆಯಿತು. ರಾತ್ರಿ 10.30ರಿಂದ 11.30ರ ನಡುವೆ ಹಳೆ ಭಂಡಾರ ರಸ್ತೆಯಲ್ಲಿ ಘರ್ಷಣೆ ಸಂಭವಿಸಿದೆ. ಅಲ್ಲಿ ಕೂಡ ಗುಂಪೊಂದು ಹಲವು ವಾಹನಗಳಿಗೆ ಬೆಂಕಿ ಹಚ್ಚಿದೆ. ಮನೆಗಳು ಮತ್ತು ಕ್ಲಿನಿಕ್‌ಗೆ ಹಾನಿಗೊಳಿಸಿತು.

ಘರ್ಷಣೆಯ ಹಿನ್ನೆಲೆ ಬಿಎನ್‌ಎಸ್‌ಎಸ್ ಸೆಕ್ಷನ್ 163ರ ಅಡಿಯಲ್ಲಿ ನಾಗ್ಪುರದ ಕೊತ್ವಾಲಿ, ಗಣೇಶ್‌ಪೇಟ್‌, ತೆಹಸಿಲ್, ಲಕಡ್ ಗಂಜ್, ಪಚ್‌ಪೋಲಿ, ಶಾಂತಿನಗರ, ನಂದನವನ್, ಇಮಾಮವಾಡ, ಯಶೋಧರನಗರ ಮತ್ತು ಕಪಿಲನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಹಿಂಸಾಚಾರದ ನಂತರ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ಮನವಿ ಮಾಡಿದರು.

ʼಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳು ಮತ್ತು ವೀಡಿಯೊಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಎಫ್ಐಆರ್ ದಾಖಲಿಸುತ್ತಿದ್ದಾರೆ. ನಾಗರಿಕರು ಶಾಂತವಾಗಿದ್ದು ಸಹಕರಿಸಬೇಕುʼ ಎಂದು ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News