ಅಕ್ರಮ ಹಣ ವರ್ಗಾವಣೆ ಚಾಲ್ತಿಯಲ್ಲಿರುವ ಚಟುವಟಿಕೆ: ಸುಪ್ರೀಂ ಕೋರ್ಟ್

Update: 2025-03-18 13:38 IST
ಅಕ್ರಮ ಹಣ ವರ್ಗಾವಣೆ ಚಾಲ್ತಿಯಲ್ಲಿರುವ ಚಟುವಟಿಕೆ: ಸುಪ್ರೀಂ ಕೋರ್ಟ್

Photo : PTI

  • whatsapp icon

ಹೊಸದಿಲ್ಲಿ: ತಮ್ಮ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ಕ್ರಮವನ್ನು ಪ್ರಶ್ನಿಸಿ ಮಾಜಿ ಐಎಎಸ್ ಅಧಿಕಾರಿ ಪ್ರದೀಪ್ ಎನ್. ಶರ್ಮ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಎಲ್ಲಿಯವರೆಗೆ ಅಕ್ರಮ ಗಳಿಕೆಯನ್ನು ಹೊಂದಿರಲಾಗುತ್ತದೆಯೊ, ಅದನ್ನು ನ್ಯಾಯಯುತ ಗಳಿಕೆ ಎಂದು ಬಿಂಬಿಸಲಾಗುತ್ತದೆಯೊ ಅಥವಾ ಅದನ್ನು ಆರ್ಥಿಕತೆಗೆ ಮರು ಪರಿಚಯಿಸಲಾಗುತ್ತದೆಯೊ, ಅಲ್ಲಿಯವರೆಗೂ ಅಕ್ರಮ ಹಣ ವರ್ಗಾವಣೆ ಒಂದು ಸ್ಥಗಿತಗೊಂಡ ಸ್ಥಿತಿಯಲ್ಲ, ಬದಲಿಗೆ ಚಾಲ್ತಿಯಲ್ಲಿರುವ ಚಟುವಟಿಕೆಯೇ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್ ನಾಥ್ ಹಾಗೂ ಪ್ರಸನ್ನ ಬಿ. ವರಾಳೆ ಅವರನ್ನೊಳಗೊಂಡ ನ್ಯಾಯಪೀಠವು, ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರುವ ಹಣದ ಪತ್ತೆಯನ್ನು ಪ್ರತ್ಯೇಕವಾಗಿ ನೋಡಕೂಡದು. ಬದಲಿಗೆ, ಒಟ್ಟಾರೆ ಹಣಕಾಸಿನ ಜಾಡು ಹಾಗೂ ಅದಕ್ಕೆ ಸಂಬಂಧಿಸಿದ ವಹಿವಾಟುಗಳನ್ನಾಗಿ ನೋಡಬೇಕು. ಈ ವೇಳೆ, ವಿಚಾರಣಾ ಸಂಗತಿಯಾದ ಸಾಕ್ಷ್ಯಾಧಾರಗಳ ಸಮಗ್ರತೆಯನ್ನು ಮೌಲ್ಯಮಾಪನ ಮಾಡಬೇಕು ಎಂದು ಹೇಳಿದೆ.

2004 ಹಾಗೂ 2005ರಲ್ಲಿ ಖಾಸಗಿ ಕಂಪನಿಗಳು ಹಾಗೂ ಖಾಸಗಿ ವ್ಯಕ್ತಿಗಳಿಗೆ ಬೃಹತ್ ಪ್ರಮಾಣದ ಭೂಮಿ ಮಂಜೂರು ಮಾಡಿರುವ ಹಾಗೂ ರಾಜ್ ಕೋಟ್ ನ ಭುಜ್ ನಲ್ಲಿ ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಮೀರಿ ಕಾರ್ಯನಿರ್ವಹಿಸಿರುವ ಆರೋಪಗಳನ್ನು ಮೇಲ್ಮನವಿದಾರರಾದ ಪ್ರದೀಪ್ ಎನ್. ಶರ್ಮ ಎದುರಿಸುತ್ತಿದ್ದಾರೆ. ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ಅನುಚಿತ ಲಾಭ ಮಾಡಿಕೊಡಲು ಕೃಷಿ ಭೂಮಿಯನ್ನು ಕೈಗಾರಿಕಾ ಭೂಮಿಯನ್ನಾಗಿ ಪರಿವರ್ತಿಸಲು ಅನುಮೋದನೆ ನೀಡಿದ್ದಾರೆ ಹಾಗೂ ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಭೂಮಿಯನ್ನು ಮಂಜೂರು ಮಾಡುವ ಮೂಲಕ ಬೊಕ್ಕಸಕ್ಕೆ ರಾಷ್ಟ್ರೀಯ ನಷ್ಟವನ್ನುಂಟು ಮಾಡಿದ್ದಾರೆ ಎಂಬ ಆರೋಪಗಳಿಗೂ ಅವರು ಗುರಿಯಾಗಿದ್ದಾರೆ.

ಶರ್ಮ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ನನ್ನ ಕಕ್ಷಿದಾರರ ಅಧಿಕಾರಾವಧಿಯಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಜಾರಿಯಲ್ಲಿಲ್ಲದೆ ಇದ್ದುದರಿಂದ ಹಾಗೂ ಆ ವೇಳೆ ಈ ಕಾನೂನಿನ ಪರಿಚ್ಛೇದದಲ್ಲಿ ಆರೋಪಿತ ಅಪರಾಧಗಳು ಸೇರ್ಪಡೆಯಾಗಿರದೆ ಇರುವುದರಿಂದ, ಆಗ ನಡೆದಿತ್ತೆನ್ನಲಾದ ಈ ಅಕ್ರಮಗಳು ಅದರ ವ್ಯಾಪ್ತಿಗೆ ಬರುವುದಿಲ್ಲ ಅಥವಾ ಆರೋಪಿತ ಅಪರಾಧಗಳನ್ನು ದೃಢೀಕರಿಸುವುದಿಲ್ಲ. ಅಲ್ಲದೆ, ಈ ನಿದರ್ಶನಗಳೇ ಅಪರಾಧದ ಮುಂದುವರಿಕೆಯನ್ನು ನಿರೂಪಿಸುವುದಿಲ್ಲ ಎಂದು ವಾದಿಸಿದರು.

ಆದರೆ, ಮೇಲ್ಮನವಿದಾರರ ಅಧಿಕಾರ ಹಾಗೂ ಹುದ್ದೆಯ ದುರ್ಬಳಕೆಯತ್ತ ಬೊಟ್ಟು ಮಾಡಿದ ನ್ಯಾಯಾಲಯ, ಮೇಲ್ಮನವಿದಾರರು ತಮ್ಮ ಅಪರಾಧ ಕೃತ್ಯಗಳನ್ನು ಮರೆಮಾಚಲು ಅಧಿಕಾರದ ದುರ್ಬಳಕೆ ಮಾಡಿಕೊಂಡಿದ್ದು, ಇದರಿಂದ ನಿಶ್ಚಿತ ಪರಿಣಾಮವುಂಟಾಗಿದೆ ಎಂದು ಅಭಿಪ್ರಾಯಪಟ್ಟಿತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News