ಹೈಕೋರ್ಟ್ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರದ ದೂರು: ಲೋಕಪಾಲ್ ಆದೇಶವನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿಂದ ಅಮಿಕಸ್ ಕ್ಯೂರಿ ನೇಮಕ

Photo : PTI
ಹೊಸದಿಲ್ಲಿ: ಹಾಲಿ ಹೈಕೋರ್ಟ್ ನ್ಯಾಯಾಧೀಶರ ವಿರುದ್ಧದ ಭ್ರಷ್ಟಾಚಾರದ ದೂರೊಂದನ್ನು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳು ಪರಿಶೀಲಿಸಬಹುದಾಗಿದೆ ಎಂದು ಜನವರಿ 27, 2025ರಂದು ಲೋಕಪಾಲ್ ನೀಡಿದ್ದ ಆದೇಶದ ಮಾನ್ಯತೆಯನ್ನು ಪರಿಶೀಲಿಸಲು ಹಿರಿಯ ವಕೀಲ ರಂಜಿತ್ ಕುಮಾರ್ ರನ್ನು ಅಮಿಕಸ್ ಕ್ಯೂರಿಯನ್ನಾಗಿ ಮಂಗಳವಾರ ಸುಪ್ರೀಂ ಕೋರ್ಟ್ ನೇಮಿಸಿದೆ.
ನ್ಯಾಯಾಲಯವು ಲೋಕಪಾಲ್ ಆದೇಶದ ವ್ಯಾಪ್ತಿಯನ್ನು ಪರಿಶೀಲಿಸಲಿದೆಯೆ ಹೊರತು, ದೂರಿನಲ್ಲಿ ಮಾಡಲಾಗಿರುವ ಆರೋಪಗಳ ಅರ್ಹತೆಯ ಕುರಿತಲ್ಲ ಎಂದು ನ್ಯಾ. ಬಿ.ಆರ್.ಗವಾಯಿ, ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಅಭಯ್ ಎಸ್. ಓಕಾರನ್ನೊಳಗೊಂಡ ನ್ಯಾಯಪೀಠ ಸ್ಪಷ್ಟಪಡಿಸಿದೆ.
ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಿದ್ದ ದೂರುದಾರರು, ನಾನು ಲಿಖಿತ ವಾದವನ್ನು ಸಲ್ಲಿಸಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ವೇಳೆ ನ್ಯಾಯಾಲಯದಲ್ಲಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಲೋಕಪಾಲ್ ಇಂತಹ ದೂರುಗಳನ್ನು ಪರಿಶೀಲಿಸುವ ವ್ಯಾಪ್ತಿ ಹೊಂದಿಲ್ಲ ಎಂದು ವಾದಿಸಿದರು.
ಆದರೆ, ದೂರುದಾರರ ಪರವಾಗಿ ನ್ಯಾಯಾಲಯಕ್ಕೆ ನೆರವು ನೀಡಲು ಹಿರಿಯ ವಕೀಲ ರಂಜಿತ್ ಕುಮಾರ್ ರನ್ನು ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಲು ನ್ಯಾಯಾಲಯ ನಿರ್ಧರಿಸಿತು.
ಫೆಬ್ರವರಿ 20ರಂದು ಲೋಕಪಾಲ್ ಆದೇಶಕ್ಕೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್, ಇದು ತುಂಬಾ ತುಂಬಾ ಕಳವಳಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
ಸೌಜನ್ಯ: deccanherald.com