ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಘೋಷಿಸಿದ ಸೋನಂ ವಾಂಗ್ಚುಕ್

Update: 2024-10-05 14:55 GMT

ಸೋನಂ ವಾಂಗ್ಚುಕ್ | PTI

ಹೊಸದಿಲ್ಲಿ: ಲಡಾಖ್ ಅನ್ನು ಸಂವಿಧಾನದ ಆರನೆಯ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಹೋರಾಟ ನಡೆಸುತ್ತಿರುವ ಲಡಾಖ್ ನ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಹಾಗೂ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಸದಸ್ಯ ಸಜ್ಜದ್ ಹುಸೈನ್ ಕಾರ್ಗಿಲಿ, ನಾವು ರಾಷ್ಟ್ರ ರಾಜಧಾನಿಯಲ್ಲಿ ಆಮರಣಾಂತ ಉಪವಾಸ ನಡೆಸಲು ಉದ್ದೇಶಿಸಿದ್ದು, ಅದಕ್ಕಾಗಿ ಸ್ಥಳವನ್ನು ಇನ್ನಷ್ಟೆ ಹುಡುಕಬೇಕಿದೆ ಎಂದು ಹೇಳಿದ್ದಾರೆ.

ರಾಷ್ಟ್ರಪತಿ, ಪ್ರಧಾನಿ ಹಾಗೂ ಗೃಹ ಸಚಿವರನ್ನು ಭೇಟಿಯಾಗಲು ಅವಕಾಶ ನೀಡಬೇಕು ಎಂಬ ನಮ್ಮ ಬೇಡಿಕೆಗೆ ನಾವು ಇದುವರೆಗೆ ಯಾವುದೇ ಸ್ಪಂದನೆಯನ್ನು ಸ್ವೀಕರಿಸದೆ ಇರುವುದರಿಂದ ನಾನು ಹಾಗೂ ಲಡಾಖ್ ನ ಪ್ರತಿಭಟನಾಕಾರರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಶುಕ್ರವಾರ ವಾಂಗ್ಚುಕ್ ಘೋಷಿಸಿದ್ದರು.

ವಾಂಗ್ಚುಕ್ ಮತ್ತು ಹುಸೈನ್ ಕಾರ್ಗಿಲಿ ನಡೆಸಲಿರುವ ಆಮರಣಾಂತ ಉಪವಾಸ ಸತ್ಯಾಗ್ರಹದೊಂದಿಗೆ ಇನ್ನೂ ಕೆಲವು ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಲಡಾಖ್ ನ ಮತ್ತೊಬ್ಬ ನಾಯಕ ಹೇಳಿದ್ದರು.

ಆದರೆ, ಶನಿವಾರದಂದು ಜಂತರ್ ಮಂತರ್ ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಅನುಮತಿ ಕೋರಿರುವುದಾಗಿ ತಿಳಿಸಿರುವ ಸೋನಂ ವಾಂಗ್ಚುಕ್, ನಾನು ಈವರೆಗೆ ಯಾವುದೇ ಅನುಮತಿಯನ್ನು ಸ್ವೀಕರಿಸಿಲ್ಲ ಎಂದೂ ಹೇಳಿದ್ದಾರೆ.

ತಮ್ಮ ಉಪವಾಸ ಸತ್ಯಾಗ್ರಹವನ್ನು ಪ್ರಕಟಿಸುವಾಗ, ತಮಗೆ ಪ್ರತಿಭಟನೆ ನಡೆಸಲು ಸ್ಥಳಾವಕಾಶ ಒದಗಿಸುವಂತೆ ಎಲ್ಲ ಗುಂಪುಗಳು, ಪಕ್ಷಗಳು ಹಾಗೂ ಸಂಘಟನೆಗಳಲ್ಲಿ ವಾಂಗ್ಚುಕ್ ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News