ಗುಜರಾತ್: ಕಳೆದ 5 ವರ್ಷಗಳಲ್ಲಿ ಮಹಿಳೆಯರು, ಮಕ್ಕಳ ಮೇಲಿನ ದೌರ್ಜನ್ಯ ಪ್ರಮಾಣ ದುಪ್ಪಟ್ಟು

Update: 2024-01-16 11:15 GMT

ಸಾಂದರ್ಭಿಕ ಚಿತ್ರ (PTI)

ಅಹಮದಾಬಾದ್: ಸರ್ಕಾರಿ ದಾಖಲೆಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಗುಜರಾತ್ ನಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧ ಪ್ರಕರಣಗಳು ಸ್ಥಿರವಾಗಿ ಏರಿಕೆಯಾಗುತ್ತಿದ್ದು, ಎನ್ಸಿಪಿಸಿಆರ್ ಹಾಗೂ ಎನ್‍ಸಿಡಬ್ಲ್ಯೂ ಕ್ರಮವಾಗಿ 2,294 ಮತ್ತು 2,271 ದೂರುಗಳನ್ನು ಸ್ವೀಕರಿಸಿವೆ ಎಂದು ಹೇಳಲಾಗಿದೆ ಎಂದು newindianexpress.com ವರದಿ ಮಾಡಿದೆ.

ಕಳೆದ ಐದು ವರ್ಷಗಳಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು 2,294 ದೂರುಗಳನ್ನು ಸ್ವೀಕರಿಸಿದ್ದರೆ, ಇದೇ ಅವಧಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದಲ್ಲಿ 2,271 ದೂರುಗಳು ದಾಖಲಾಗಿವೆ.

ಡಿಸೆಂಬರ್ 6, 2023ರಂದು ರಾಜ್ಯಸಭೆಯಲ್ಲಿ ಕೇಳಲಾಗಿದ್ದ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು, ರಾಷ್ಟ್ರೀಯ ಮಕ್ಕಳು ಹಕ್ಕುಗಳ ರಕ್ಷಣಾ ಆಯೋಗವು 2018-19ರ ಅವಧಿಯಲ್ಲಿ 77 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಸ್ವೀಕರಿಸಿದ್ದರೆ, 2019-20ರಲ್ಲಿ 1,478, 2020-21ರಲ್ಲಿ 42, 2021-22ರಲ್ಲಿ 279 ಹಾಗೂ 2022-23ರಲ್ಲಿ 418 ದೂರುಗಳನ್ನು ಸ್ವೀಕರಿಸಿದೆ. ಒಟ್ಟಾರೆಯಾಗಿ, ಕಳೆದ ಐದು ವರ್ಷಗಳಲ್ಲಿ 2,294 ಪ್ರಕರಣಗಳು ದಾಖಲಾಗಿದ್ದು, ಕಳೆದ ಐದು ವರ್ಷಗಳಲ್ಲಿ 2018-19ರಿಂದ 2022-23ರ ನಡುವೆ ಪ್ರಕರಣಗಳು ಐದು ಪಟ್ಟು ಹೆಚ್ಚಳಗೊಂಡಿರುವುದನ್ನು ಸೂಚಿಸುತ್ತಿದೆ ಎಂದು ತಿಳಿಸಿದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ತಾನು ಸ್ವೀಕರಿಸಿದ ದೂರಗಳ ಪೈಕಿ, 2018-19ರಲ್ಲಿ 81 ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ, 2019-20ರಲ್ಲಿ 1,478, 2020-21ರಲ್ಲಿ 42 ಪ್ರಕರಣಗಳು, 2021-22ರಲ್ಲಿ 279 ಪ್ರಕರಣಗಳು ಹಾಗೂ 2022-23ರಲ್ಲಿ 418 ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ.

ಈ ನಡುವೆ, ರಾಷ್ಟ್ರೀಯ ಮಹಿಳಾ ಆಯೋಗವು 2018-19ರಲ್ಲಿ 12 ಪ್ರಕರಣಗಳ ಬಗ್ಗೆ ಸ್ವಯಂಪ್ರೇರಿತ ಕ್ರಮ ಅಥವಾ ಗಂಭೀರವಾಗಿ ಪರಿಗಣಿಸಿದ್ದರೆ, 2019-20ರಲ್ಲಿ 16 ಪ್ರಕರಣಗಳು, 2020-21ರಲ್ಲಿ 2, 2021-22ರಲ್ಲಿ 6 ಹಾಗೂ 2022-23ರಲ್ಲಿ 2 ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದೆ.

ರಾಜ್ಯಸಭೆಗೆ ಸರ್ಕಾರವು ಒದಗಿಸಿರುವ ಅಂಕಿ-ಅಂಶಗಳ ಪ್ರಕಾರ, ಗುಜರಾತ್ ನಲ್ಲಿನ ರಾಷ್ಟ್ರೀಯ ಮಹಿಳಾ ಆಯೋಗವು 2018ರಲ್ಲಿ 247 ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರೆ, 2019ರಲ್ಲಿ 298, 2020ರಲ್ಲಿ 393, 2021ರಲ್ಲಿ 458, 2022ರಲ್ಲಿ 415 ಹಾಗೂ ನವೆಂಬರ್ 30, 2023ಕ್ಕೆ ಕೊನೆಗೊಂಡಂತೆ 460 ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಇದರಿಂದ ಒಟ್ಟು ಮಹಿಳಾ ದೌರ್ಜನ್ಯ ಪ್ರಕರಣಗಳ ಸಂಖ್ಯೆ 2,271 ಆಗಿದ್ದು, ಮಹಿಳಾ ದೌರ್ಜನ್ಯ ಪ್ರಕರಣಗಳು ದುಪ್ಪಟ್ಟಾಗಿರುವುದನ್ನು ಇದು ಸೂಚಿಸುತ್ತಿದೆ. ಇನ್ನು 2018ರಲ್ಲಿ 158 ಪ್ರಕರಣಗಳು, 2019ರಲ್ಲಿ 327 ಪ್ರಕರಣಗಳು, 2020ರಲ್ಲಿ 226 ಪ್ರಕರಣಗಳು, 2021ರಲ್ಲಿ 284 ಪ್ರಕರಣಗಳು, 2022ರಲ್ಲಿ 260 ಪ್ರಕರಣಗಳು ಹಾಗೂ 2023ರಲ್ಲಿ 224 ಪ್ರಕರಣಗಳಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವು ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News