ದಾರಿತಪ್ಪಿಸುವ ಜಾಹೀರಾತು ಪ್ರಕರಣ: ಸುಪ್ರೀಂ ಕೋರ್ಟ್ ಮುಂದೆ ಕ್ಷಮೆಯಾಚಿಸಿದ ರಾಮದೇವ್
ಹೊಸದಿಲ್ಲಿ: ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿರ್ದೇಶಾನುಸಾರ ಇಂದು ಪತಂಜಲಿ ಆಯುರ್ವೇದ ಸಂಸ್ಥೆಯ ಸಹಸ್ಥಾಪಕರಾಗಿರುವ ಯೋಗ ಗುರು ರಾಮದೇವ್ ನ್ಯಾಯಾಲಯದ ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದಾರೆ.
ರಾಮದೇವ್ ಹಾಗೂ ಪತಂಜಲಿಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ಖುದ್ದಾಗಿ ಹಾಜರಾಗುವಂತೆ ಕಳೆದ ವಿಚಾರಣೆ ವೇಳೆ ಸೂಚಿಸಿದ್ದ ಸುಪ್ರೀಂ ಕೋರ್ಟ್ ಅದೇ ಸಮಯ ಸಂಸ್ಥೆಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು.
“ಕ್ರಮಕ್ಕೆ ಸಿದ್ಧರಾಗಿ” ಎಂದು ಇಂದಿನ ವಿಚಾರಣೆ ವೇಳೆ ಬಾಬಾ ರಾಮದೇವ್ ಅವರಿಗೆ ಸುಪ್ರೀಂ ಕೋರ್ಟ್ ಹೇಳಿದೆ.
ಕಳೆದ ವಿಚಾರಣೆ ವೇಳೆ ಸಂಸ್ಥೆಯ ವಕೀಲರು ಸಂಸ್ಥೆಯ ಆಡಳಿತದ ಪರವಾಗಿ ಬೇಷರತ್ ಕ್ಷಮೆಯಾಚಿಸಿದ್ದರಲ್ಲದೆ ಸಂಸ್ಥೆಯ ಉತ್ಪನ್ನಗಳನ್ನು ಬಳಸಿ ಆರೋಗ್ಯಕರ ಜೀವನವನ್ನು ಜನರು ನಡೆಸಬೇಕೆಂಬುದೇ ತನ್ನ ಉದ್ದೇಶ ಎಂದು ಹೇಳಿತ್ತು.
ದಾರಿತಪ್ಪಿಸುತ್ತಿವೆ ಎಂದು ಆರೋಪಿಸಲಾದ ಜಾಹೀರಾತುಗಳ ಪ್ರಸಾರವನ್ನು ನಿಲ್ಲಿಸುವಂತೆ ಪತಂಜಲಿ ಸಂಸ್ಥೆಗೆ ಫೆಬ್ರವರಿ 27ರಂದು ನ್ಯಾಯಾಲಯ ಆದೇಶಿಸಿತ್ತು.