ವೆಂಕಟ ದತ್ತ ಸಾಯಿ ಜೊತೆ ಬ್ಯಾಡ್ಮಿಂಟನ್ ತಾರೆ ಸಿಂಧು ನಿಶ್ಚಿತಾರ್ಥ
ಹೈದರಾಬಾದ್: ಎರಡು ಒಲಿಂಪಿಕ್ ಪದಕಗಳನ್ನು ಗೆದ್ದಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಅವರ ವಿವಾಹ ನಿಶ್ಚಿತಾರ್ಥ ಪೊಸಿಡೆಕ್ಸ್ ಟೆಕ್ನಾಲಜೀಸ್ ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟದತ್ತ ಸಾಯಿ ಎಂಬುವವರ ಜತೆ ನೆರವೇರಿದೆ.
ಶನಿವಾರ ಸಿಂಧು ಈ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದು, ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಜೋಡಿ ಡಿಸೆಂಬರ್ 22ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಡಿಸೆಂಬರ್ 20ರಂದು ವಿವಾಹ ಸಮಾರಂಭ ಆರಂಭವಾಗಲಿದ್ದು, ಹೈದರಾಬಾದ್ನಲ್ಲಿ ಔತಣಕೂಟವಿರುತ್ತದೆ. ಆ ಬಳಿಕ ಸಿಂಧು ಮುಂದಿನ ಸೀಸನ್ ಗೆ ತರಬೇತಿಗೆ ತೆರಳುವರು.
ಎರಡೂ ಕುಟುಂಬಗಳು ಪರಸ್ಪರ ಚಿರಪರಿಚಿತವಾಗಿದ್ದರೂ, ವಿವಾಹದ ಪ್ರಸ್ತಾವ ಒಂದು ತಿಂಗಳ ಹಿಂದಷ್ಟೇ ಬಂದಿದೆ. ಮುಂದಿನ ವರ್ಷದ ಸ್ಪರ್ಧೆಗೆ ತರಬೇತಿ ಪಡೆಯಬೇಕಾಗಿರುವುದರಿಂದ ಇಬ್ಬರೂ ಈ ದಿನಾಂಕವನ್ನು ವಿವಾಹಕ್ಕೆ ನಿಗದಿಪಡಿಸಿಕೊಂಡಿದ್ದಾಗಿ ಸಿಂಧು ತಂದೆ ವಿವರಿಸಿದ್ದಾರೆ.
2019ರಲ್ಲಿ ಬಿಡಬ್ಲ್ಯುಎಫ್ ವಿಶ್ವಚಾಂಪಿಯನ್ ಶಿಪ್ ಗೆಲ್ಲುವ ಮೂಲಕ ಸಿಂಧು, ಈ ಸಾಧನೆ ಮಾಡಿದ ಮೊಟ್ಟಮೊದಲ ಮತ್ತು ಏಕೈಕ ಭಾರತೀಯ ಬ್ಯಾಡ್ಮಿಂಟನ್ ತಾರೆ ಎನಿಸಿಕೊಂಡಿದ್ದರು. 2016 ರ ರಿಯೊ ಒಲಿಂಪಿಕ್ಸ್ ಮತ್ತು 2020ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಗೆಲ್ಲುವ ಮೂಲಕ ಅವರು ನಿರಂತರ ಎರಡು ಒಲಿಂಪಿಕ್ ಕ್ರೀಡೆಗಳಲ್ಲಿ ವೈಯಕ್ತಿಕ ಪದಕ ಗೆದ್ದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.