ಸುಪ್ರೀಂಕೋರ್ಟ್ ನ ಒಳಮೀಸಲಾತಿ ತೀರ್ಪು ವಿರೋಧಿಸಿ ನಾಳೆ (ಆ.21) ಭಾರತ್ ಬಂದ್
ಹೊಸದಿಲ್ಲಿ : ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಒಳಮೀಸಲಾತಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಪ್ರತಿಭಟಿಸಿ ಬುಧವಾರ ‘ಮೀಸಲಾತಿ ಬಚಾವೋ ’ ಸಮಿತಿಯು ಬುಧವಾರ ಭಾರತ ಬಂದ್‌ಗೆ ಕರೆ ನೀಡಿದೆ.
ರಾಜಸ್ತಾನದ ಎಸ್‌ಸಿ/ಎಸ್‌ಟಿ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಬಂದ್ ವೇಳೆ ಯಾವುದೇ ಉದ್ವಿಗ್ನ ಪರಿಸ್ಥಿತಿ ತಲೆದೋರುವುದನ್ನು ತಡೆಯಲು ರಾಜಸ್ಥಾನದ ಎಲ್ಲಾ ಜಿಲ್ಲೆಗಳಲ್ಲಿ ಪೊಲೀಸ್ ನಿಯೋಜನೆಯನ್ನು ಹೆಚ್ಚಿಸುವಂತೆ ರಾಜ್ಯ ಸರಕಾರ ಸೂಚಿಸಿದೆ.
ಭಾರತ ಬಂದ್ ವೇಳೆ ಕಾನೂನು, ಸುವ್ಯವಸ್ಥೆಯನ್ನು ಖಾತರಿಪಡಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ. ಬಂದ್ ಗೆ ಕರೆ ನೀಡಲಾದ ಸಂಘಟನೆಗಳ ನಾಯಕರ ಜೊತೆ ಮಾತುಕತೆಗಳನ್ನು ನಡೆಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಎಸ್ ಸಿ ಹಾಗೂ ಎಸ್ ಟಿ ಪಂಗಡಗಳ ಉಪವರ್ಗಗಳಿಗೆ ಒಳಮೀಸಲಾತಿ ಸೃಷ್ಟಿಸುವುದಕ್ಕೆ ಸುಪ್ರೀಂಕೋರ್ಟ್ ಇತ್ತೀಚೆಗೆ ನೀಡಿದ ಆದೇಶದಲ್ಲಿ ತಿಳಿಸಿತ್ತು. ಎಸ್‌ಸಿ, ಎಸ್‌ಟಿ ಸಮುದಾಯಗಳಲ್ಲಿ ಅತ್ಯಂತ ದುರ್ಬಲಪಂಗಡಗಳ ಮೀಸಲಾತಿಯಲ್ಲಿ ಆದ್ಯತೆ ನೀಡಬೇಕೆಂದು ನ್ಯಾಯಾಲಯವು ತೀರ್ಪಿನಲ್ಲಿ ಪ್ರತಿಪಾದಿಸಿತ್ತು.
ಭಾರತ ಬಂದ್ ಗೆ ವಿವಿಧ ಸಾಮಾಜಿಕ ಹಾಗೂ ರಾಜಕೀಯ ಸಂಘಟನೆಗಳಿಂದ ಬೆಂಬಲ ದೊರೆಯುವ ನಿರೀಕ್ಷೆಯಿದೆ.
ಬಂದ್ ವೇಳೆ ಹಿಂಸಾಚಾರ ನಡೆಯುವ ಸಾಧ್ಯತೆಯಿರುವುದರಿಂದ, ಯಾವುದೇ ಅಹಿತಕರ ಘಟನೆಗಳು ಸಂಭವಿಸುವುದನ್ನು ತಡೆಯಲು ಉನ್ನತ ಪೊಲೀಸ್ ಅಧಿಕಾರಿಗಳು ವೀಡಿಯೊ ಕಾನ್ಫರೆನ್ಸ್ ಮೂಲಕ ಸಮಾಲೋಚನೆಗಳನ್ನು ನಡೆಸಿರುವುದಾಗಿ.
ಕಾನೂನು, ಸುರಕ್ಷತೆಯ ದೃಷ್ಟಿಯಂದ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಪಶ್ಚಿಮ ಉತ್ತರ ಪ್ರದೇಶದಲ್ಲಿಯೂ ಭಾರತ್ ಬಂದ್ ಹಿನ್ನೆಲೆಯಲ್ಲಿ ಪೊಲೀಸರನ್ನು ಕಟ್ಟೆಚ್ಚರಿಸಲಾಗಿದೆ. ಬಂದ್ ಅವಧಿಯಲ್ಲಿ ಸಾರ್ವಜನಿಕ ಸಾರಿಗೆ ಕಾರ್ಯಾಚರಿಸುವುದಿಲ್ಲ . ಆ್ಯಂಬುಲೆನ್ಸ್‌ಗಳು ಮತ್ತಿತರ ತುರ್ತುಸೇವೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಲಾಗುವುದು ಎಂದರು.
ಬಂದ್ ವೇಳೆ ಅಂಗಡಿ, ಮುಂಗಟ್ಟೆಗಳನ್ನು ಮುಚ್ಚುಗಡೆಗೊಳಿಸುವಂತೆಯೂ ಬಂದ್ ಸಂಘಟಕರು ಕರೆ ನೀಡಿದ್ದಾರೆ.