ಚುನಾವಣಾ ಅಧಿಕಾರಿಗಳನ್ನು ನೇಮಿಸುವ ಪ್ರಮುಖ ಮಸೂದೆಯನ್ನು ಅಂಗೀಕರಿಸಿದ ಲೋಕಸಭೆ

Update: 2023-12-21 11:07 GMT

ಹೊಸದಿಲ್ಲಿ: ಸಂಸದರ ಅಮಾನತುಗಳ ಬಗ್ಗೆ ಪ್ರತಿಪಕ್ಷಗಳು ಸದನದ ಹೊರಗೆ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಕ್ಕೆ ಹೊಸ ಕಾರ್ಯವಿಧಾನವನ್ನು ಸ್ಥಾಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಇಂದು ಅಂಗೀಕರಿಸಲಾಗಿದೆ.

ಈಗಾಗಲೇ ರಾಜ್ಯಸಭೆಯು ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವಧಿ) ಮಸೂದೆ, 2023 ಯನ್ನು ಅನುಮೋದಿಸಿತ್ತು. ಆದ್ದರಿಂದ, ಮಸೂದೆಯು ರಾಷ್ಟ್ರಪತಿಯವರ ಒಪ್ಪಿಗೆಗಾಗಿ ಹೋಗಲಿದೆ.

ಇಂದು ಲೋಕಸಭೆಯಲ್ಲಿ ನಡೆದ ಮಸೂದೆಯ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ಉನ್ನತ ಚುನಾವಣಾ ಅಧಿಕಾರಿಗಳ ಸೇವಾ ಷರತ್ತುಗಳ ಮೇಲಿನ 1991 ರ ಕಾಯಿದೆಯು ಅರೆಬೆಂದ ಪ್ರಯತ್ನವಾಗಿತ್ತು. ಪ್ರಸ್ತುತ ಮಸೂದೆಯು ಹಿಂದಿನ ಕಾಯಿದೆಯಲ್ಲಿ ಕೈಬಿಟ್ಟ ಕ್ಷೇತ್ರಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

ವಿಪಕ್ಷಗಳು ಈ ಮಸೂದೆಯನ್ನು ಟೀಕಿಸಿದ್ದು, ಇದು ಚುನಾವಣಾ ಸಮಿತಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂಬ ಆರೋಪಿಸಿದೆ.

ಪ್ರಧಾನಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯ ಸಲಹೆಯ ಮೇರೆಗೆ ಚುನಾವಣಾ ಆಯುಕ್ತರನ್ನು ನೇಮಿಸಬೇಕು ಎಂದು ಈ ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News