ಕೇಜ್ರಿವಾಲ್‌ರನ್ನು ಜೈಲಿನಲ್ಲೇ ಹತ್ಯೆಗೈಯ್ಯಲು ಬಿಜೆಪಿ ಪಿತೂರಿ ನಡೆಸುತ್ತಿದೆ: ಆಪ್ ಆರೋಪ

Update: 2024-07-15 07:11 GMT

ಅರವಿಂದ್ ಕೇಜ್ರಿವಾಲ್‌ (PTI)

ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಅವರನ್ನು ಜೈಲಿನಲ್ಲೇ ಹತ್ಯೆಗೈಯ್ಯಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಮತ್ತೊಂದು ಗಂಭೀರ ಆರೋಪ ಮಾಡಿದೆ.

ರವಿವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಿಲ್ಲಿ ಸಚಿವೆ ಅತಿಶಿ, "ಅರವಿಂದ್ ಕೇಜ್ರಿವಾಲ್‌ರ ಆರೋಗ್ಯ ನಿಧಾನಕ್ಕೆ ಕ್ಷೀಣಿಸುತ್ತಿದೆ. ಒಂದು ವೇಳೆ ಅವರ ಆರೋಗ್ಯ ಸ್ಥಿತಿ ಗಂಭೀರವಾದರೆ, ಅದಕ್ಕೆ ಬಿಜೆಪಿಯೊಂದೇ ಹೊಣೆ. ಕಳೆದ ಕೆಲವು ವಾರಗಳಿಂದ ರಾತ್ರಿ ಹೊತ್ತು ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣವು 50ಕ್ಕಿಂತಲೂ ಕಡಿಮೆಯಾಗುವ ಮೂಲಕ ಕೋಮಾ ಅಥವಾ ಮಿದುಳು ಪಾರ್ಶ್ವವಾಯು ಆಗುವ ಅಪಾಯವನ್ನು ತಂದೊಡ್ಡಿದೆ" ಎಂದು ಆರೋಪಿಸಿದ್ದಾರೆ.

"ಕೇಜ್ರಿವಾಲ್‌ರನ್ನು ಜೈಲಿಗೆ ಹಾಕುವುದಷ್ಟೇ ಬಿಜೆಪಿಯ ಪಿತೂರಿಯಲ್ಲ, ಬದಲಿಗೆ ಅವರನ್ನು ಹತ್ಯೆಗೈಯ್ಯುವುದು" ಎಂದೂ ಅವರು ಆರೋಪಿಸಿದ್ದಾರೆ.

ಆದರೆ, ಆಮ್ ಆದ್ಮಿ ಪಕ್ಷ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ, ಕೇಜ್ರಿವಾಲ್‌ರ ಜಾಮೀನು ಅರ್ಜಿಯ ಮೇಲೆ ಒತ್ತಡ ಹೇರಲು ಆಮ್ ಆದ್ಮಿ ಪಕ್ಷದ ನಾಯಕರು ಪ್ರತಿ ದಿನ ಒಂದೇ ಸಾಲಿನ ಆರೋಪವನ್ನು ಪದೇ ಪದೇ ಮಾಡುತ್ತಿದ್ದಾರೆ ಎಂದು ಪ್ರತಿ ಆರೋಪ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ದಿಲ್ಲಿ ಬಿಜೆಪಿ ಮುಖ್ಯಸ್ಥ ವಿರೇಂದ್ರ ಸಚ್‌ದೇವ್, " ದಿಲ್ಲಿ ನಿವಾಸಿಗಳು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಅರವಿಂದ್ ಕೇಜ್ರಿವಾಲ್‌, ಒಂದು ದಿನವೂ ಆಸ್ಪತ್ರೆಗೆ ತೆರಳಿದ್ದನ್ನು ನೋಡಲಿಲ್ಲ. ನಿನ್ನೆ ಆಪ್ ಸಂಸದ ಸಂಜಯ್ ಸಿಂಗ್ ಏನು ಹೇಳಿದ್ದರೋ ಅದನ್ನೇ ಇಂದು ಅತಿಶಿ ಪುನರುಚ್ಚರಿಸಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.

ಅಬಕಾರಿ ನೀತಿ ಹಗರಣದ ಸಂಬಂಧ ಜಾರಿ ನಿರ್ದೇಶನಾಲಯವು ದಾಖಲಿಸಿಕೊಂಡಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜುಲೈ 12ರಂದು ಸುಪ್ರೀಂಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಆದರೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿಕೊಂಡಿರುವ ಮತ್ತೊಂದು ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್‌ ಸಲ್ಲಿಸಿರುವ ಜಾಮೀನು ಅರ್ಜಿಯ ಕುರಿತು ದಿಲ್ಲಿ ಹೈಕೋರ್ಟ್ ತನ್ನ ನಿರ್ಧಾರ ಪ್ರಕಟಿಸುವವರೆಗೂ ಅರವಿಂದ್ ಕೇಜ್ರಿವಾಲ್ ಜೈಲಿನಲ್ಲೇ ಇರಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News