ರಷ್ಯ-ಉಕ್ರೇನ್ ಯುದ್ಧ ವಲಯಕ್ಕೆ ಭಾರತೀಯರ ಕಳ್ಳಸಾಗಣೆ

Update: 2024-03-14 17:40 GMT

Photo Credit: X/@mukut_suyash

ಭೋಪಾಲ: ರಷ್ಯಕ್ಕೆ ಭಾರತೀಯರ ಮಾನವ ಕಳ್ಳಸಾಗಣೆ ಮತ್ತು ರಷ್ಯ-ಉಕ್ರೇನ್ ಯುದ್ಧವಲಯದ ಮುಂಚೂಣಿ ನೆಲೆಗಳಲ್ಲಿ ಅವರ ಬಲವಂತದ ನಿಯೋಜನೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿಕೊಂಡಿರುವ ಪ್ರಕರಣದ ಆರೋಪಿಗಳಲ್ಲಿ ಮಧ್ಯಪ್ರದೇಶದ ಧಾರ್ ಜಿಲ್ಲೆಯ ನಗರಸಭಾ ಬಿಜೆಪಿ ಸದಸ್ಯೆಯ ಪುತ್ರ ಸೇರಿದ್ದಾನೆ.

ಧಾರ್ ನಗರ ಪಾಲಿಕೆಗೆ ಮೊದಲ ಬಾರಿಗೆ ಆಯ್ಕೆಯಾಗಿರುವ ಆಡಳಿತಾರೂಢ ಬಿಜೆಪಿ ಸದಸ್ಯೆ ಅನಿತಾ ಮುಕುಟ್ ಅವರ ಪುತ್ರ ಸುಯಷ್ ಮುಕುಟ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಓರ್ವನಾಗಿದ್ದಾನೆ. ಸಿಬಿಐ ಮಾ.6ರಂದು ಖಾಸಗಿ ವೀಸಾ ಕನ್ಸಲ್ಟನ್ಸಿ ಸಂಸ್ಥೆಗಳು, ಏಜೆಂಟರು ಮತ್ತು ಇತರರ ವಿರುದ್ಧ ಮಾನವ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಿತ್ತು.

ಸಿಬಿಐನ ಅಧಿಕೃತ ಹೇಳಿಕೆಯ ಪ್ರಕಾರ, ಪ್ರಕರಣದಲ್ಲಿ ಹೆಸರಿಸಲ್ಪಟ್ಟವರು ಉತ್ತಮ ಉದ್ಯೋಗ ಮತ್ತು ಹೆಚ್ಚಿನ ವೇತನದ ಆಮಿಷವನ್ನೊಡ್ಡಿ ಭಾರತೀಯರನ್ನು ರಷ್ಯಕ್ಕೆ ಕಳ್ಳಸಾಗಣೆ ಮಾಡುತ್ತಿದ್ದರು. ಈ ಏಜೆಂಟರ ಮಾನವ ಕಳ್ಳಸಾಗಣೆ ಜಾಲ ದೇಶದ ವಿವಿಧ ರಾಜ್ಯಗಳಲ್ಲಿ ಹರಡಿಕೊಂಡಿದೆ.

ರಷ್ಯವನ್ನು ತಲುಪಿದ ಬಳಿಕ ಈ ಉದ್ಯೋಗಾಕಾಂಕ್ಷಿಗಳಿಗೆ ಯುದ್ಧ ತರಬೇತಿಯನ್ನು ನೀಡಿ ಅವರನ್ನು ಬಲವಂತದಿಂದ ರಷ್ಯ-ಉಕ್ರೇನ್ ಯುದ್ಧವಲಯದ ಮುಂಚೂಣಿ ನೆಲೆಗಳಲ್ಲಿ ನಿಯೋಜಿಸಲಾಗಿತ್ತು. ಆ ಮೂಲಕ ಅವರ ಜೀವಗಳನ್ನು ಗಂಭೀರ ಅಪಾಯಕ್ಕೆ ತಳ್ಳಲಾಗಿತ್ತು. ಈ ಪೈಕಿ ಕೆಲವು ಬಲಿಪಶುಗಳು ಯುದ್ಧರಂಗದಲ್ಲಿ ತೀವ್ರವಾಗಿ ಗಾಯಗೊಂಡಿರುವುದು ಖಚಿತಪಟ್ಟಿದೆ.

ಸುಯಷ್ ಮುಕುಟ್ ದಿಲ್ಲಿ ಮೂಲದ 24 G7 ಆರ್ಎಎಸ್ ಓವರ್ಸೀಸ್ ಫೌಂಡೇಷನ್ ನ ನಿರ್ದೇಶಕನಾಗಿದ್ದಾನೆ.

ಬಲ್ಲ ಮೂಲಗಳ ಪ್ರಕಾರ ಮುಕುಟ್ ಕುಟುಂಬವು 15-20 ವರ್ಷಗಳ ಹಿಂದೆ ನೆರೆಯ ಇಂದೋರ ಜಿಲ್ಲೆಯಿಂದ ಧಾರ್ ಪಟ್ಟಣಕ್ಕೆ ಸ್ಥಳಾಂತರಗೊಂಡಿತ್ತು.

2022ರಲ್ಲಿ ಅನಿತಾ ಮುಕುಟ್ ಮೊದಲ ಬಾರಿಗೆ ಬಿಜೆಪಿ ಸದಸ್ಯೆಯಾಗಿ ಧಾರ್ ನಗರ ಪಾಲಿಕೆಗೆ ಆಯ್ಕೆಯಾಗಿದ್ದರು. ಇಂದೋರಿನ ಕೆಲವು ಪ್ರಮುಖ ಬಿಜೆಪಿ ನಾಯಕರೊಂದಿಗೆ ಕುಟುಂಬದ ಸಾಮೀಪ್ಯದಿಂದಾಗಿ ಅವರಿಗೆ ಬಿಜೆಪಿ ಟಿಕೆಟ್ ಲಭಿಸಿತ್ತು ಎನ್ನಲಾಗಿದೆ.

ಸುಯಷ್ ರಷ್ಯಾದಲ್ಲಿ ನೆಲೆಸಿದ್ದಾನೆ ಮತ್ತು ಅಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯಬಯಸುವ ವಿದ್ಯಾರ್ಥಿಗಳಿಗೆ ನೆರವಾಗುವ ಆರ್ಎಎಸ್ ಓವರ್ಸೀಸ್ ಫೌಂಡೇಷನ್ನ ಅಧ್ಯಕ್ಷ ಮತ್ತು ಸ್ಥಾಪಕನಾಗಿದ್ದಾನೆ ಎಂದು ಆತನ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ಹ್ಯಾಂಡಲ್ನಲ್ಲಿ ಉಲ್ಲೇಖಿಸಲಾಗಿದೆ.

ಸುಯಷ್ನ ಸಂಸ್ಥೆಯು ಮುಖ್ಯವಾಗಿ ವಿದ್ಯಾರ್ಥಿ ವೀಸಾಗಳಲ್ಲಿ ಶಂಕಾಸ್ಪದ ಸಂದರ್ಭಗಳಡಿ 180 ವ್ಯಕ್ತಿಗಳನ್ನು ರಷ್ಯಕ್ಕೆ ಕಳುಹಿಸಿತ್ತು ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News