ಚುನಾವಣಾ ಬಾಂಡ್ ಗಳ ಮೂಲಕ 400 ಕೋ.ರೂ. ಸಂಗ್ರಹಿಸಲು ಬಿಜೆಪಿಯಿಂದ ತನಿಖಾ ಸಂಸ್ಥೆಗಳ ದುರುಪಯೋಗ: ಖರ್ಗೆ
ಹೊಸದಿಲ್ಲಿ : ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಯಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡುವ ಮೂಲಕ ಬಿಜೆಪಿ ಚುನಾವಣಾ ಬಾಂಡ್ಗಳ ಮೂಲಕ 400 ಕೋ.ರೂ. ಸಂಗ್ರಹಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಆರೋಪಿಸಿದ್ದಾರೆ.
ಮಾದ್ಯಮ ವರದಿಗಳನ್ನು ಉಲ್ಲೇಖಿಸಿದ ಖರ್ಗೆ, 45 ಕಂಪೆನಿಗಳು ತಮ್ಮ ಮೇಲೆ ದಾಳಿ ನಡೆದ ಬಳಿಕ ಚುನಾವಣಾ ಬಾಂಡ್ ಮೂಲಕ ಬಿಜೆಪಿಗೆ ದೇಣಿಗೆ ನೀಡಿವೆ ಎಂದು ಹೊಸ ತನಿಖೆ ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.
‘‘ಇದು ಹೆಚ್ಚು ದೇಣಿಗೆ ಪಡೆಯಲು ಬ್ಲಾಕ್ಮೇಲ್, ಸುಲಿಗೆ, ಲೂಟಿ, ದಬ್ಬಾಳಿಕೆ ಅಲ್ಲವೇ? ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆ ದಾಳಿ ಬಳಿಕ ಇನ್ನೂ 15ಕ್ಕೂ ಅಧಿಕ ಕಂಪೆನಿಗಳು ಬಿಜೆಪಿಗೆ ದೇಣಿಗೆ ನೀಡಿವೆ ಎಂಬುದನ್ನು ಹೊಸ ತನಿಖೆ ಬಹಿರಂಗಪಡಿಸಿದೆ. ಒಟ್ಟು 45 ಕಂಪೆನಿಗಳು ಬಿಜೆಪಿಗೆ ಸುಮಾರು 400 ಕೋಟಿ ದೇಣಿಗೆ ನೀಡಿವೆ’’ ಎಂದು ಖರ್ಗೆ ‘ಎಕ್ಸ್’ನ ಪೋಸ್ಟ್ ನಲ್ಲಿ ಆರೋಪಿಸಿದ್ದಾರೆ.
‘‘ವರದಿಯ ಪ್ರಕಾರ 4 ಬೇನಾಮಿ ಕಂಪೆನಿಗಳು ಕೂಡ ಬಿಜೆಪಿಗೆ ದೇಣಿಗೆ ನೀಡಿವೆ. ಸರ್ವಾಧಿಕಾರಿ ಮೋದಿ ಸರಕಾರ ಕಾಂಗ್ರೆಸ್ ನ ಬ್ಯಾಂಕ್ ಖಾತೆಯನ್ನು ಸ್ತಂಭನಗೊಳಿಸಿತ್ತು. ಆದರೆ, ಅದು ಮಾತ್ರ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಹಣ ಸಂಗ್ರಹಿಸುತ್ತಿದೆ’’ ಎಂದು ಅವರು ಆರೋಪಿಸಿದರು.
ಬಿಜೆಪಿಗೆ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇದ್ದರೆ, ಸ್ವತಂತ್ರ್ಯ ತನಿಖೆಯ ಮೂಲಕ ತನ್ನ ಸ್ವಂತ ಹಣಕಾಸು ವ್ಯವಹಾರಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಖರ್ಗೆ ಆಗ್ರಹಿಸಿದ್ದಾರೆ.