ಮಹಿಳೆಯನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ: ಬಿಜೆಪಿ ನಾಯಕನ ಪತ್ನಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲು

Update: 2023-10-23 07:23 GMT

ಮುಂಬೈ: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ 40 ವರ್ಷದ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಿಜೆಪಿಯ ಎಂಎಲ್‌ಸಿಯೊಬ್ಬರ ಪತ್ನಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

ಅಕ್ಟೋಬರ್ 15 ರಂದು ಹಲ್ಲೆ ನಡೆದಿದ್ದರೂ, ಶನಿವಾರ ಭಾರತೀಯ ದಂಡ ಸಂಹಿತೆ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ 1989 ರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಾಸಕ ಸುರೇಶ್ ಧಾಸ್ ಅವರ ಪತ್ನಿ ಪ್ರಜಕ್ತಾ ಧಾಸ್ ಅವರು ತಮ್ಮ ಸಹಚರರಾದ ರಾಹುಲ್ ಜಗದಾಳೆ ಮತ್ತು ರಾಘವ್ ಪವಾರ್ ಅವರ ಸಹಾಯದೊಂದಿಗೆ ತಮ್ಮ ಪೂರ್ವಜರ ಜಮೀನನ್ನು ಬಲವಂತವಾಗಿ ಕಬಳಿಸಲು ಯತ್ನಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ತಾನು ತನ್ನ ಗಂಡ ಮತ್ತು ಸೊಸೆಯೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಧಾಸ್ ಮತ್ತು ಇಬ್ಬರು ಪುರುಷರು ತಮ್ಮ ಹೊಲಕ್ಕೆ ಬಂದು, ಈ ಜಮೀನು ತನಗೆ ಸೇರಿದ್ದು ಎಂದು ಪ್ರಜಕ್ತಾ ಧಾಸ್ ಹೇಳಿದ್ದಾರೆ. ಆದರೆ, ಈ ಜಮೀನು 65 ವರ್ಷಗಳಿಂದ ಅದು ತಮ್ಮ ಕುಟುಂಬದಲ್ಲಿದೆ ಎಂದು ದೂರುದಾರೆ ಪ್ರತಿಪಾದಿಸಿದರು. ಪ್ರಜಕ್ತಾ ಧಾಸ್ ಅವರ ಆದೇಶದ ಮೇರೆಗೆ ಜಗದಾಲಿ ಮತ್ತು ಪವಾರ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.

ಈ ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಮುಖ್ಯಸ್ಥೆ ರೂಪಾಲಿ ಚಕಂಕರ್ ಅವರು ಶೀಘ್ರ ಪೊಲೀಸ್ ಕ್ರಮಕ್ಕೆ ಆಗ್ರಹಿಸಿದ್ದಾರೆ.

"ನಾನು ಘಟನೆಯ ವಿವರಗಳನ್ನು ಬೀಡ್ ಪೊಲೀಸ್ ಅಧೀಕ್ಷಕರಿಂದ ವೈಯಕ್ತಿಕವಾಗಿ ಕೇಳಿದ್ದೇನೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಮಹಿಳೆಗೆ ನ್ಯಾಯ ಸಿಗುವವರೆಗೆ ಆಯೋಗವು ಕ್ರಮ ಕೈಗೊಳ್ಳಲಿದೆ" ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News