ಮುಸ್ಲಿಮ್ ಪುರುಷರು ಒಂದಕ್ಕಿಂತ ಹೆಚ್ಚು ವಿವಾಹಗಳನ್ನು ನೋಂದಾಯಿಸಿಕೊಳ್ಳಬಹುದು : ಬಾಂಬೆ ಹೈಕೋರ್ಟ್
ಮುಂಬೈ : ಮುಸ್ಲಿಮ್ ವೈಯಕ್ತಿಕ ಕಾನೂನುಗಳು ಬಹುವಿವಾಹಗಳನ್ನು ಅನುಮತಿಸಿವೆ,ಹೀಗಾಗಿ ಮುಸ್ಲಿಮ್ ವ್ಯಕ್ತಿಯೋರ್ವ ಒಂದಕ್ಕಿಂತ ಹೆಚ್ಚು ವಿವಾಹಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಬಾಂಬೆ ಉಚ್ಛ ನ್ಯಾಯಾಲಯವು ಎತ್ತಿ ಹಿಡಿದಿದೆ.
ಮುಸ್ಲಿಮ್ ವ್ಯಕ್ತಿಯೋರ್ವರು ತನ್ನ ಮೂರನೇ ವಿವಾಹದ ನೋಂದಣಿಯನ್ನು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಬಿ.ಪಿ.ಕೊಲಾಬಾವಾಲಾ ಮತ್ತು ಸೋಮಶೇಖರ ಸುಂದರೇಶನ್ ಅವರ ವಿಭಾಗೀಯ ಪೀಠವು ಇದನ್ನು ಸ್ಪಷ್ಟಪಡಿಸಿದೆ.
ಮುಸ್ಲಿಮ್ ವ್ಯಕ್ತಿಯೋರ್ವರು ಅಲ್ಜೀರಿಯಾದ ಮಹಿಳೆಯೊಂದಿಗೆ ತನ್ನ ಮೂರನೇ ವಿವಾಹದ ನೋಂದಣಿಯನ್ನು ಕೋರಿ ಕಳೆದ ವರ್ಷದ ಫೆಬ್ರವರಿಯಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಗೊಳಿಸುವಂತೆ ಪೀಠವು ಅ.15ರಂದು ಥಾಣೆ ಮಹಾನಗರ ಪಾಲಿಕೆಯ ಉಪ ವಿವಾಹ ನೋಂದಣಿ ಕಚೇರಿಗೆ ನಿರ್ದೇಶನ ನೀಡಿದೆ.
ಇದು ಪುರುಷನ ಮೂರನೇ ವಿವಾಹವಾಗಿದ್ದರಿಂದ ನೋಂದಣಿಯನ್ನು ತಿರಸ್ಕರಿಸಲಾಗಿದೆ ಎಂದು ತಮ್ಮ ಅರ್ಜಿಯಲ್ಲಿ ಹೇಳಿದ್ದ ದಂಪತಿ ,ತಮಗೆ ವಿವಾಹ ಪ್ರಮಾಣಪತ್ರವನ್ನು ವಿತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿಕೊಂಡಿದ್ದರು.
ಮಹಾರಾಷ್ಟ್ರ ಮ್ಯಾರೇಜ್ ಬ್ಯೂರೊಗಳ ನಿಯಂತ್ರಣ ಮತ್ತು ವಿವಾಹ ನೋಂದಣಿ ಕಾಯ್ದೆಯಡಿ ವಿವಾಹದ ವ್ಯಾಖ್ಯೆಯು ಒಂದು ವಿವಾಹವನ್ನು ಮಾತ್ರ ಪರಿಗಣಿಸುತ್ತದೆ, ಬಹುವಿವಾಹಗಳನ್ನಲ್ಲ ಎಂಬ ಕಾರಣದಿಂದ ವಿವಾಹವನ್ನು ನೋಂದಾಯಿಸಿಕೊಳ್ಳಲು ಅಧಿಕಾರಿಗಳು ನಿರಾಕರಿಸಿದ್ದರು.
ವಿವಾಹ ನೋಂದಣಿ ಪ್ರಾಧಿಕಾರದ ನಿರಾಕರಣೆಯನ್ನು ‘ಸಂಪೂರ್ಣ ತಪ್ಪುಕಲ್ಪನೆ’ ಎಂದು ಬಣ್ಣಿಸಿದ ಪೀಠವು, ಮುಸ್ಲಿಮ್ ಪುರುಷ ತನ್ನ ಮೂರನೇ ವಿವಾಹವನ್ನು ನೋಂದಣಿ ಮಾಡಿಕೊಳ್ಳುವುದನ್ನು ತಡೆಯುವ ಯಾವುದೇ ಅಂಶವು ಇಡೀ ಕಾಯ್ದೆಯಲ್ಲಿ ಎಲ್ಲಿಯೂ ಕಂಡು ಬಂದಿಲ್ಲ. ಮುಸ್ಲಿಮರ ವೈಯಕ್ತಿಕ ಕಾನೂನುಗಳಡಿ ಅವರು ಏಕಕಾಲದಲ್ಲಿ ನಾಲ್ವರು ಪತ್ನಿಯರನ್ನು ಹೊಂದಿರಬಹುದಾಗಿದೆ ಎಂದು ತನ್ನ ತೀರ್ಪಿನಲ್ಲಿ ತಿಳಿಸಿದೆ.
ಅಧಿಕಾರಿಗಳ ವಾದವನ್ನು ತಾನು ಒಪ್ಪಿಕೊಂಡರೆ ಅದು ಮಹಾರಾಷ್ಟ್ರ ಮ್ಯಾರೇಜ್ ಬ್ಯೂರೊಗಳ ನಿಯಂತ್ರಣ ಮತ್ತು ವಿವಾಹದ ನೋಂದಣಿ ಕಾಯ್ದೆಯು ಮುಸ್ಲಿಮ್ ವೈಯಕ್ತಿಕ ಕಾನೂನುಗಳನ್ನು ಅತಿಕ್ರಮಿಸಿದೆ ಮತ್ತು/ಅಥವಾ ಸ್ಥಾನಪಲ್ಲಟಗೊಳಿಸಿದೆ ಎಂಬ ಅರ್ಥವನ್ನು ನೀಡುತ್ತದೆ ಎಂದು ಹೇಳಿದ ಪೀಠವು, ಆದರೆ ಮುಸ್ಲಿಮ್ ವೈಯಕ್ತಿಕ ಕಾನೂನುಗಳನ್ನು ಹೊರಗಿರಿಸಲಾಗಿದೆ ಎಂಬ ಅಂಶವನ್ನು ಕಾಯ್ದೆಯು ಎಲ್ಲಿಯೂ ಸೂಚಿಸಿಲ್ಲ. ವಿಪರ್ಯಾಸವೆಂದರೆ ಇದೇ ಅಧಿಕಾರಿಗಳು ಅರ್ಜಿದಾರರ ಎರಡನೇ ವಿವಾಹವನ್ನು ನೋಂದಾಯಿಸಿಕೊಂಡಿದ್ದರು ಎಂದು ಬೆಟ್ಟು ಮಾಡಿತು.
ಅರ್ಜಿದಾರ ದಂಪತಿ ಕೆಲವು ದಾಖಲೆಗಳನ್ನು ಒದಗಿಸಿಲ್ಲ ಎಂದೂ ಅಧಿಕಾರಿಗಳು ಹೇಳಿದಾಗ ಎರಡು ವಾರಗಳಲ್ಲಿ ಸಂಬಂಧಿತ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಅರ್ಜಿದಾರರಿಗೆ ನ್ಯಾಯಾಲಯವು ಸೂಚಿಸಿತು.
ಈ ದಾಖಲೆಗಳು ಸಲ್ಲಿಸಲ್ಪಟ್ಟ ಬಳಿಕ ಥಾಣೆ ಮಹಾನಗರ ಪಾಲಿಕೆಯ ಸಂಬಂಧಿತ ಪ್ರಾಧಿಕಾರವು ಅರ್ಜಿದಾರರ ವಿಚಾರಣೆಯನ್ನು ನಡೆಸಿ 10 ದಿನಗಳಲ್ಲಿ ವಿವಾಹ ನೋಂದಣಿಗೆ ಅನುಮತಿಯನ್ನು ನೀಡಿ ಅಥವಾ ನಿರಾಕರಿಸಿ ಸಕಾರಣದೊಂದಿಗೆ ಆದೇಶವನ್ನು ಹೊರಡಿಸಬೇಕು ಎಂದು ನ್ಯಾಯಾಲಯವು ನಿರ್ದೇಶನ ನೀಡಿತು.
ಅಲ್ಲಿಯವರೆಗೆ ಈ ವರ್ಷದ ಮೇ ತಿಂಗಳಲ್ಲಿ ಪಾಸ್‌ಪೋರ್ಟ್ ಅವಧಿ ಅಂತ್ಯಗೊಂಡಿರುವ ಅರ್ಜಿದಾರ ಮಹಿಳೆಯ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ಉಚ್ಛ ನ್ಯಾಯಾಲಯವು ಆದೇಶಿಸಿತು.