ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ವಿಸ್ತರಣೆಗೆ ಕೇಂದ್ರ ಸಂಪುಟ ಅನುಮೋದನೆ
ಹೊಸದಿಲ್ಲಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ವಿಸ್ತರಣೆಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದ್ದು, ಪ್ರಮುಖ ರಸಗೊಬ್ಬರಕ್ಕೆ ಸಬ್ಸಿಡಿಯನ್ನು ಕೂಡ ಹೆಚ್ಚಿಸಿದೆ. ಈ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಹೊಸ ವರ್ಷದಲ್ಲಿ ಸರ್ಕಾರದ ಮೊದಲ ನಿರ್ಧಾರ ರೈತರಿಗೆ ಸಮರ್ಪಿತವಾಗಿದೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಸರಕಾರದ ಹೊಸ ವರ್ಷದ ಮೊದಲ ನಿರ್ಧಾರವು ನಮ್ಮ ದೇಶದ ಕೋಟ್ಯಂತರ ರೈತ ಸಹೋದರ ಸಹೋದರಿಯರಿಗೆ ಸಮರ್ಪಿತವಾಗಿದೆ. ಬೆಳೆ ವಿಮಾ ಯೋಜನೆಗೆ ಹೆಚ್ಚಿನ ನಿಧಿಯನ್ನು ನಾವು ಅನುಮೋದಿಸಿದ್ದೇವೆ. ಇದು ರೈತರ ಬೆಳೆಗಳಿಗೆ ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ. ಡಿ-ಅಮೋನಿಯಂ ಫಾಸ್ಫೇಟ್(ಡಿಎಪಿ) ಮೇಲೆ ವಿಶೇಷ ಪ್ಯಾಕೇಜ್ ಅನ್ನು ವಿಸ್ತರಿಸುವ ಕ್ಯಾಬಿನೆಟ್ ನಿರ್ಧಾರವು ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರವನ್ನು ಪಡೆಯಲು ಸಹಾಯ ಮಾಡಲಿದೆ ಎಂದು ಹೇಳಿದ್ದಾರೆ.
'ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ'ಯನ್ನು 2025-26ರವರೆಗೆ ಮುಂದುವರಿಸಲು ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಒಟ್ಟಾರೆ 69,515.71 ಕೋಟಿ ರೂ.ಗಳನ್ನು ಮೀಸಲಿರಿಸಿದೆ. 2025ರ ಮೊದಲ ಕ್ಯಾಬಿನೆಟ್ ನಮ್ಮ ರೈತರ ಸಮೃದ್ಧಿಯನ್ನು ಹೆಚ್ಚಿಸಲು ಸಮರ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿರುವುದು ನನಗೆ ಖುಷಿ ತಂದಿದೆ ಎಂದು ಮೋದಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಮಾಹಿತಿ ಹಾಗೂ ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್, 2020-21ರಿಂದ 2024-25ರವರೆಗೆ ಈ ಯೋಜನೆಗಳ ಒಟ್ಟು ವೆಚ್ಚ 66,550 ಕೋಟಿ ಆಗಿತ್ತು. ಈ ವಿಮೆಗಳ ಕುರಿತು ರೈತರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಈ ಯೋಜನೆಗಳನ್ನು 15ನೇ ಹಣಕಾಸು ಆಯೋಗದ ಅವಧಿ ಮುಗಿಯುವವರೆಗೆ ಮುಂದುವರಿಸಲಾಗುತ್ತದೆ. ಯೋಜನೆಗಳ ಒಟ್ಟು ಮೊತ್ತವನ್ನು 69,550 ಕೋಟಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದ್ದಾರೆ.