ಉತ್ತರ ಪ್ರದೇಶ | ಸ್ವಘೋಷಿತ ಗೋರಕ್ಷಕರಿಂದ ಹತ್ಯೆಗೊಳಗಾದ ವ್ಯಕ್ತಿಯ ವಿರುದ್ಧವೇ ಪ್ರಕರಣ ದಾಖಲು; ಸ್ನೇಹಿತನ ಬಂಧನ

Update: 2025-01-04 07:41 GMT

ಶಾಹಿದೀನ್ ಖುರೇಷಿ 

ಮೊರಾದಾಬಾದ್: ಗೋಹತ್ಯೆ ಆರೋಪದ ಮೇಲೆ 37 ವರ್ಷದ ಶಾಹಿದೀನ್ ಖುರೇಷಿ ಎಂಬವರ ಮೇಲೆ ಸ್ವಘೋಷಿತ ಗೋರಕ್ಷಕರ ಗುಂಪೊಂದು ಕ್ರೂರವಾಗಿ ಹಲ್ಲೆ ನಡೆಸಿ ನಂತರ ಕೊಲೆ ಮಾಡಿದ ಕೆಲವು ದಿನಗಳ ನಂತರ, ಪೊಲೀಸರು ಬುಧವಾರ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಕೊಲೆ ಪ್ರಕರಣದಲ್ಲಿ ಯಾವುದೇ ಆರೋಪಿಗಳನ್ನು ಇದುವರೆಗೂ ಬಂಧಿಸಿಲ್ಲ.

ಮೊರಾದಾಬಾದ್‌ನ ಮಜೋಲಾ ಪ್ರದೇಶದಲ್ಲಿ ಖುರೇಷಿ ಮತ್ತು ಆತನ ಸ್ನೇಹಿತ ಮಹಮ್ಮದ್ ಅದ್ನಾನ್ ಎತ್ತನ್ನು ಕೊಂದಿದ್ದಾರೆ ಎಂದು ಆರೋಪಿಸಿ ಸ್ವಘೋಷಿತ ಗೋರಕ್ಷಕರ ಗುಂಪು ದಾಳಿ ನಡೆಸಿತ್ತು. ದಾಳಿಯಿಂದಾಗಿ ಖುರೇಷಿ ತೀವ್ರ ಗಾಯಗೊಂಡಿದ್ದು, ಅದ್ನಾನ್ ಹಂತಕರ ಗುಂಪಿನಿಂದ ತಪ್ಪಿಸಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿರುವ ಮಜೋಲಾ ಸ್ಟೇಷನ್ ಹೌಸ್ ಅಧಿಕಾರಿ ಮೋಹಿತ್ ಚೌಧರಿ, ಈ ಪ್ರಕರಣದಲ್ಲಿ ಎರಡು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ದೃಢಪಡಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

"ನಾವು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಖುರೇಷಿ ಮತ್ತು ಮಹಮ್ಮದ್ ಅದ್ನಾನ್ ವಿರುದ್ಧ ಗೋಹತ್ಯೆ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದೇವೆ. ಖುರೇಷಿ ಸಹೋದರ ಮಹಮ್ಮದ್ ಶಹಜಾದ್ ನೀಡಿದ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಿಸಲಾಗಿದೆ" ಎಂದು ಅವರು ಹೇಳಿದ್ದಾರೆ.

ಕೊಲೆ ಎಫ್‌ಐಆರ್ ದಾಖಲಿಸಿದ್ದರೂ, ಯಾರನ್ನೂ ಬಂಧಿಸಲಾಗಿಲ್ಲ. ತನಿಖೆ ಮುಂದುವರೆದಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ನಗರ) ಕುಮಾರ್ ರನ್ ವಿಜಯ್ ಸಿಂಗ್ ಹೇಳಿದ್ದಾರೆ. ಖುರೇಷಿ ಹತ್ಯೆಗೆ ಸಂಬಂಧಿಸಿದಂತೆ ನಾವು ಇಲ್ಲಿಯವರೆಗೆ ಯಾರನ್ನೂ ಬಂಧಿಸಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು.

ದಾಳಿಯ ನಂತರ, ಗಂಭೀರ ಸ್ಥಿತಿಯಲ್ಲಿದ್ದ ಖುರೇಷಿಯನ್ನು ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ಸಂಜೆ ಅವರು ಸಾವನ್ನಪ್ಪಿದರು.

ಖುರೇಷಿ ಅವರು ಪತ್ನಿ ರಿಝ್ವಾನಾ ಮತ್ತು 13, 11 ಮತ್ತು 9 ವರ್ಷ ವಯಸ್ಸಿನ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಘಟನೆಯ ಬಗ್ಗೆ ಖುರೇಷಿ ಪತ್ನಿ ರಿಝ್ವಾನಾ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಾ, "ಪ್ರಾಣಿಯ ಸಾವಿಗೆ ಮಾನವ ಜೀವ ತೆಗೆದುಕೊಳ್ಳುವ ಹಕ್ಕನ್ನು ಅವರಿಗೆ ಯಾರು ನೀಡಿದ್ದಾರೆ? ನನ್ನ ಪತಿಗೆ ನಡೆದಿರುವುದು ಕ್ರೂರ" ಎಂದು ಅವರು ಹೇಳಿದ್ದಾರೆ.

ಖುರೇಷಿ ಮೇಲೆ ದಾಳಿ ಮಾಡಿರುವ ಗುಂಪು ಜೈ ಶ್ರೀರಾಂ ಘೋಷಣೆ ಕೂಗುತ್ತಾ ಹಲ್ಲೆ ನಡೆಸಿರುವ ವಿಡಿಯೋ ವೈರಲ್‌ ಆಗಿದ್ದರೂ, ಈ ಕೃತ್ಯವನ್ನು ಗುಂಪು ಹತ್ಯೆ ಎಂದು ಕರೆಯಲು ಹೆಚ್ಚುವರಿ ಸೂಪರಿಂಟೆಂಡೆಂಟ್ ಸಿಂಗ್ ನಿರಾಕರಿಸಿದ್ದಾರೆ.

"ಜಾತಿ, ಧರ್ಮ ಅಥವಾ ನಂಬಿಕೆ ಆಧಾರದ ಮೇಲೆ ಯಾರನ್ನಾದರೂ ಕೊಲ್ಲುವುದು ʼಲಿಂಚಿಂಗ್‌ʼನ ವ್ಯಾಖ್ಯಾನವಾಗಿದೆ. ಇಲ್ಲಿ, ಗುಂಪು ಖುರೇಷಿಯ ಧರ್ಮವನ್ನು ತಿಳಿದಿರಲಿಲ್ಲ, ಆದ್ದರಿಂದ ಅದನ್ನು ʼಗುಂಪು ಹತ್ಯೆʼ ಎಂದು ಕರೆಯಲಾಗುವುದಿಲ್ಲ" ಎಂದು ಅವರು ಹೇಳಿದ್ದಾರೆ ಎಂದು theprint.in ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News