ನಾನು ಅವರೊಂದಿಗೆ ತಪ್ಪಾಗಿ ಮೈತ್ರಿ ಮಾಡಿಕೊಂಡೆ: ಲಾಲೂರ ಭವಿಷ್ಯದ ಮೈತ್ರಿ ಆಹ್ವಾನವನ್ನು ತಳ್ಳಿ ಹಾಕಿದ ನಿತೀಶ್ ಕುಮಾರ್
ಪಾಟ್ನಾ: ಅಧಿಕಾರದಲ್ಲಿದ್ದಾಗ ಏನೂ ಮಾಡದ ಆರ್ಜೆಡಿ ಪಕ್ಷದೊಂದಿಗೆ ನಾನು ತಪ್ಪಾಗಿ ಮೈತ್ರಿ ಮಾಡಿಕೊಂಡೆ ಎಂದು ಹೇಳುವ ಮೂಲಕ ತಮ್ಮ ಬದ್ಧ ವೈರಿಯಾದ ಆರ್ಜೆಡಿ ಪಕ್ಷದ ವರಿಷ್ಠ ಲಾಲೂ ಪ್ರಸಾದ್ ಯಾದವ್ ರ ಭವಿಷ್ಯದ ಮೈತ್ರಿ ಆಹ್ವಾನವನ್ನು ರವಿವಾರ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಳ್ಳಿ ಹಾಕಿದ್ದಾರೆ.
ಸದ್ಯ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಮರಳಿರುವ ಮಾಜಿ ಮಿತ್ರ ಪಕ್ಷವಾದ ಜೆಡಿಯುಗೆ ಬಾಗಿಲನ್ನು ಮುಕ್ತವಾಗಿ ತೆರೆದಿರುವುದಾಗಿ ಕೆಲ ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿಯೂ ಆದ ಆರ್ಜೆಡಿ ವರಿಷ್ಠ ಲಾಲೂ ಪ್ರಸಾದ್ ಯಾದವ್ ಹೇಳಿಕೆ ನೀಡಿದ ಬೆನ್ನಿಗೇ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ರಿಂದ ಈ ಪ್ರತಿಕ್ರಿಯೆ ಹೊರ ಬಿದ್ದಿದೆ.
ರಾಜ್ಯಾದ್ಯಂತ ನಡೆಯುತ್ತಿರುವ ಪ್ರಗತಿ ಯಾತ್ರೆಯ ಭಾಗವಾಗಿ ಉತ್ತರ ಬಿಹಾರದ ಮುಝಾಫ್ಫರ್ ಪುರ್ ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನಮಗಿಂತಲೂ ಮುಂಚೆ ಅಧಿಕಾರದಲ್ಲಿದ್ದವರು ಏನಾದರೂ ಮಾಡಿದ್ದರೆ? ಸೂರ್ಯ ಮುಳುಗಿದ ನಂತರ, ಜನರು ತಮ್ಮ ಮನೆಗಳಿಂದ ಹೊರಗೆ ಹೆಜ್ಜೆ ಇಡಲು ಹೆದರುತ್ತಿದ್ದರು. ನಾನು ಅವರೊಂದಿಗೆ ತಪ್ಪಾಗಿ ಒಂದೆರಡು ಬಾರಿ ಮೈತ್ರಿ ಮಾಡಿಕೊಂಡಿದ್ದೆ. ಅದಕ್ಕೂ ಮುನ್ನ ಮಹಿಳೆಯರ ಪರಿಸ್ಥಿತಿ ಹೇಗಿತ್ತು? ನೀವೀಗ ನಾವು ಜೀವಿಕಾ ಎಂದು ಹೆಸರಿಸಿರುವ ಸ್ವಸಹಾಯ ಗುಂಪುಗಳನ್ನು ನೋಡಬಹುದು. ನಮ್ಮ ಮಾದರಿಯನ್ನು ನಕಲು ಮಾಡಿರುವ ಕೇಂದ್ರ ಸರಕಾರ, ಆ ಯೋಜನೆಗೆ ಆಜೀವಿಕಾ ಎಂದು ಹೆಸರಿಸಿದೆ. ನೀವು ಈ ಹಿಂದೆ ಇಂತಹ ಆತ್ಮವಿಶ್ವಾಸದ ಗ್ರಾಮೀಣ ಮಹಿಳೆಯರನ್ನು ನೋಡಿದ್ದಿರಾ?” ಎಂದು ಪ್ರಶ್ನಿಸಿದ್ದಾರೆ.
ಇನ್ನು ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಬಾಕಿ ಇರುವ ಬಿಹಾರ ವಿಧಾನಸಭಾ ಚುನಾವಣೆಗೆ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಸ್ಪಷ್ಟ ನಿಲುವು ಪ್ರಕಟಿಸಿದ ನಂತರ, ಲಾಲೂ ಪ್ರಸಾದ್ ಯಾದವ್ ರಿಂದ ಭವಿಷ್ಯದ ಮೈತ್ರಿ ಕುರಿತ ಹೇಳಿಕೆ ಹೊರ ಬಿದ್ದಿತ್ತು.