ವಿದ್ಯಾರ್ಥಿ ಪ್ರತಿಭಟನೆ ಬೆಂಬಲಿಸಿ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ; ಪ್ರಶಾಂತ್ ಕಿಶೋರ್ ಬಂಧನ
ಪಾಟ್ನಾ: ಬಿಹಾರ ರಾಜಧಾನಿಯ ಗಾಂಧಿ ಮೈದಾನದಲ್ಲಿ ವಿದ್ಯಾರ್ಥಿ ಪ್ರತಿಭಟನೆಯನ್ನು ಬೆಂಬಲಿಸಿ ಅನಿರ್ಧಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಜನ ಸುರಾಜ್ ಪಾರ್ಟಿ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರನ್ನು ಸೋಮವಾರ ನಸುಕಿನಲ್ಲಿ ಬಿಹಾರ ಪೊಲೀಸರು ಬಂಧಿಸಿದ್ದಾರೆ.
ಪ್ರಶಾಂತ್ ಕಿಶೋರ್ ಅವರನ್ನು ಬಲವಂತವಾಗಿ ಆ್ಯಂಬುಲೆನ್ಸ್ ನಲ್ಲಿ ಎಐಐಎಂಎಸ್ ಗೆ ಕರೆದೊಯ್ಯಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ಪೊಲೀಸರ ಜತೆ ತೆರಳಲು ನಿರಾಕರಿಸಿದಾಗ ಪ್ರಶಾಂತ್ ಕಿಶೋರ್ ಮೇಲೆ ಪೊಲೀಸರು ಬಲಪ್ರಯೋಗ ಮಾಡಿದ್ದಾರೆ ಎಂದೂ ಹೇಳಲಾಗಿದೆ.
ಪ್ರಶಾಂತ್ ಕಿಶೋರ್ ಚಿಕಿತ್ಸೆಗೆ ನಿರಾಕರಿಸಿದ್ದು, ಆಮರಣಾಂತ ಉಪವಾಸ ಮುಂದುವರಿಸುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರೀ ಕೋಲಾಹಲದ ನಡುವೆ ಪ್ರಶಾಂತ್ ಕಿಶೋರ್ ಮತ್ತು ಇತರ ಪ್ರತಿಭಟನಾಕಾರರನ್ನು ಉಪವಾಸ ಸತ್ಯಾಗ್ರಹ ಸ್ಥಳದಿಂದ ದೊಡ್ಡ ಸಂಖ್ಯೆಯ ಪೊಲೀಸರು ತೆರವುಗೊಳಿಸುತ್ತಿರುವುದು ವಿಡಿಯೊ ತುಣುಕಿನಲ್ಲಿ ಕಂಡುಬರುತ್ತಿದೆ.
ಪೂರ್ಣಾವಧಿ ರಾಜಕೀಯಕ್ಕೆ ಧುಮುಕುವ ಮುನ್ನ ಚುನಾವಣಾ ತಂತ್ರಗಾರರಾಗಿದ್ದ ಕಿಶೋರ್, ಬಿಹಾರ ಲೋಕಸೇವಾ ಆಯೋಗ ಆಯೋಜಿಸಿದ್ದ 70ನೇ ಸಂಯುಕ್ತ (ಪ್ರಾಥಮಿಕ) ಸ್ಪರ್ಧಾತ್ಮಕ ಪರೀಕ್ಷೆಯನ್ನು ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ರದ್ದುಪಡಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸಿ, ಜನವರಿ 2 ರಿಂದ ಅನಿರ್ದಿಷ್ಟಾವಧಿಯ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.