ಇ-ಕ್ಯಾಬಿನೆಟ್ ವ್ಯವಸ್ಥೆಯನ್ನು ಪರಿಚಯಿಸಲಿರುವ ಮಹಾರಾಷ್ಟ್ರ ಸರಕಾರ: ಸರಕಾರದ ನಿರ್ಧಾರಗಳು ಪೋರ್ಟಲ್ ನಲ್ಲಿ ಪ್ರಕಟ
ಮುಂಬೈ: ಕಾಗದ ಬಳಕೆಯನ್ನು ಕಡಿತಗೊಳಿಸಿ, ಸಂಪುಟ ಸಭೆಯಲ್ಲಿ ಸಾಂಪ್ರದಾಯಿಕ ದಾಖಲೀಕರಣವನ್ನು ಸ್ಮಾರ್ಟ್ ಟ್ಯಾಬ್ಲೆಟ್ ಗೆ ಬದಲಿಸಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದ್ದು, ಶೀಘ್ರವೇ ಇ-ಕ್ಯಾಬಿನೆಟ್ ವ್ಯವಸ್ಥೆಯನ್ನು ಪರಿಚಯಿಸಲು ಮುಂದಾಗಿದೆ.
ಮಂಗಳವಾರ ಸಚಿವ ಸಂಪುಟ ಸಭೆ ಮುಕ್ತಾಯಗೊಂಡ ನಂತರ, ವಿದ್ಯುನ್ಮಾನ ಸಾಧನ ಉಪಕ್ರಮವನ್ನು ಪ್ರಸ್ತುತಪಡಿಸಿದ ಮುಖ್ಯ ಕಾರ್ಯದರ್ಶಿ ಸುಜಾತಾ ಸೌನಿಕ್, ಸರಕಾರದ ಕೆಲಸವನ್ನು ಹೆಚ್ಚು ಪಾರದರ್ಶಕಗೊಳಿಸಲು ಹಾಗೂ ಪ್ರಾಕೃತಿಕವಾಗಿ ಸುಸ್ಥಿರವಾಗಿಸುವ ಗುರಿಯನ್ನು ಹೊಂದಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವ್ಯವಸ್ಥೆಯಿಂದ ನಾಗರಿಕರು ಸಚಿವ ಸಂಪುಟ ಸಭೆ ನಿರ್ಧಾರಗಳ ಪ್ರಕಟಣೆಗೇ ಮೀಸಲಾಗಿರುವ ಪೋರ್ಟಲ್ ಮೂಲಕ ಸಚಿವ ಸಂಪುಟ ಸಭೆಯ ನಿರ್ಧಾರಗಳನ್ನು ಪರಿಶೀಲಿಸಲು ಪ್ರವೇಶ ಪಡೆಯಬಹುದಾಗಿದೆ. ಆಡಳಿತ ಪ್ರಕ್ರಿಯೆಗಳಿಗೆ ಚುರುಕು ಮುಟ್ಟಿಸಲು ಹಾಗೂ ನಾಗರಿಕರಿಗೆ ಸಚಿವ ಸಂಪುಟದ ನಿರ್ಧಾರಗಳನ್ನು ಸಕಾಲದಲ್ಲಿ ತಲುಪಿಸಲು ತಂತ್ರಜ್ಞಾನ ಅಳವಡಿಕೆಯ ಅಗತ್ಯದ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಒತ್ತಿ ಹೇಳಿದ ನಂತರ, ಈ ಡಿಜಿಟಲ್ ಉಪಕ್ರಮಕ್ಕೆ ಚಾಲನೆ ನೀಡಲಾಗಿದೆ.
ಈ ವ್ಯವಸ್ಥೆಯಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕಾಗದದ ಬಳಕೆ ಕಡಿತಗೊಳ್ಳಲಿದ್ದು, ಸಾಂಪ್ರದಾಯಿಕ ದಾಖಲೀಕರಣದ ಜಾಗದಲ್ಲಿ ಸ್ಮಾರ್ಟ್ ಟ್ಯಾಬ್ಲೆಟ್ ಗಳು ಪರಿಚಯಗೊಳ್ಳಲಿವೆ. ಈ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ ಆಧಾರಿತ ಪರಿಹಾರದಿಂದ ಸಚಿವರು ಬಳಕೆಗೆ ಸುಲಭವಾದ ಡ್ಯಾಶ್ ಬೋರ್ಡ್ ಮೂಲಕ ಸೂಕ್ತ ಉಲ್ಲೇಖಗಳು, ಪರಾಮರ್ಶೆ ಕ್ರಿಯೆ ಅಂಶಗಳನ್ನು ಪ್ರವೇಶಿಸಲು ಹಾಗೂ ನಿರ್ಧಾರಗಳ ಅನುಷ್ಠಾನದ ಮೇಲುಸ್ತುವಾರಿ ವಹಿಸಲು ಸಾಧ್ಯವಾಗಲಿದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.