ಪೆರಿಯಾ ಅವಳಿ ಕೊಲೆ ಪ್ರಕರಣ: ಮಾಜಿ ಶಾಸಕ ಕುಂಞಿರಾಮನ್ ಸೇರಿ ನಾಲ್ವರು ಅಪರಾಧಿಗಳಿಗೆ ವಿಧಿಸಿದ್ದ ಶಿಕ್ಷೆಗೆ ಕೇರಳ ಹೈಕೋರ್ಟ್ ತಡೆ

Update: 2025-01-08 07:58 GMT

ಕೇರಳ ಹೈಕೋರ್ಟ್ (Photo credit: PTI)

ಕೊಚ್ಚಿ: ಪೆರಿಯಾ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಅಪರಾಧಿಗಳಿಗೆ ವಿಧಿಸಿದ್ದ ಶಿಕ್ಷೆಗೆ ಕೇರಳ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ಪೆರಿಯಾ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಶಾಸಕ ಕೆ.ವಿ.ಕುಂಞರಾಮನ್, ಕೆ.ಮಣಿಕಂಠನ್, ರಾಘವನ್ ವೆಳುತ್ತೊಳಿ, ಕೆ.ವಿ.ಭಾಸ್ಕರನ್ ಎಂಬವರಿಗೆ ತಲಾ ಐದು ವರ್ಷಗಳ ಸಜೆ ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಅಪರಾಧಿಗಳು ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಈ ನಾಲ್ವರು ಪ್ರಸ್ತುತ ಕಣ್ಣೂರು ಕೇಂದ್ರ ಕಾರಾಗೃಹದಲ್ಲಿದ್ದಾರೆ.

ಐದು ವರ್ಷಗಳ ಹಿಂದೆ ಕಾಸರಗೋಡು ಜಿಲ್ಲೆಯ ಪೆರಿಯಾದಲ್ಲಿ ಇಬ್ಬರು ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ಹತ್ಯೆಗೈದ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯವು 10 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು, ಸಿಪಿಎಂನ ಮಾಜಿ ಶಾಸಕ ಕುಂಞಿರಾಮನ್ ಸೇರಿದಂತೆ ಇತರ ನಾಲ್ವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಪೆರಿಯ ಕಲ್ಯೊಟ್ ನಿವಾಸಿಗಳಾದ ಕೃಪೇಶ್ (19) ಮತ್ತು ಶರತ್ ಲಾಲ್(21) ಅವರನ್ನು 2019ರ ಫೆಬ್ರವರಿ 17ರ ರಾತ್ರಿ ತಂಡವೊಂದು ಹತ್ಯೆ ಮಾಡಿತ್ತು. ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸರು , ರಾಜ್ಯ ಅಪರಾಧ ವಿಭಾಗ ಹಾಗೂ ಸಿಬಿಐ ತನಿಖೆ ನಡೆಸಿತ್ತು. ಪ್ರಕರಣದಲ್ಲಿ ಒಟ್ಟು 24 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪೈಕಿ 10 ಮಂದಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News