ನಿಯಮಗಳ ಉಲ್ಲಂಘನೆ: ಓಲಾ ಸಿಇಒ ಅಗರವಾಲ್‌ಗೆ ಸೆಬಿಯಿಂದ ಕಠಿಣ ಎಚ್ಚರಿಕೆ

Update: 2025-01-08 10:12 GMT

ಸಿಇಒ ಭವಿಷ್ ಅಗರವಾಲ್ | PC : X\ @bhash

ಹೊಸದಿಲ್ಲಿ: ವಿಸ್ತರಣೆ ಯೋಜನೆಗಳನ್ನು ಶೇರು ವಿನಿಮಯ ಕೇಂದ್ರಗಳಿಗೆ ತಿಳಿಸುವ ಮುನ್ನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ ಮೂಲಕ ಬಹಿರಂಗಗೊಳಿಸುವಿಕೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಓಲಾ ಇಲೆಕ್ಟ್ರಿಕ್ ಮೊಬಿಲಿಟಿ ಲಿ.ಗೆ ಸೆಬಿ ಕಠಿಣ ಎಚ್ಚರಿಕೆಯನ್ನು ನೀಡಿದೆ.

ಸೆಬಿ ಜ.7ರಂದು ಲಿಸ್ಟಿಂಗ್ ಮತ್ತು ಬಹಿರಂಗಗೊಳಿಸುವಿಕೆ ನಿಯಮಗಳ ಹಲವಾರು ಉಲ್ಲಂಘನೆಗಳನ್ನು ಉಲ್ಲೇಖಿಸಿ ಓಲಾಕ್ಕೆ ಆಡಳಿತಾತ್ಮಕ ಎಚ್ಚರಿಕೆ ಪತ್ರವನ್ನು ಕಳುಹಿಸಿದೆ.

ಕಂಪನಿಯ ಸಿಇಒ ಭವಿಷ್ ಅಗರವಾಲ್ ಅವರು ಕಂಪನಿ ಒಡೆತನದ ಸ್ಟೋರ್‌ಗಳ ನಾಲ್ಕು ಪಟ್ಟು ವಿಸ್ತರಣೆಗಾಗಿ ಯೋಜನೆಗಳನ್ನು 2024,ಡಿ.2ರಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು,ಆದರೆ ಸುಮಾರು ನಾಲ್ಕು ಗಂಟೆಗಳ ನಂತರವಷ್ಟೇ ಯೋಜನೆಗಳ ಮಾಹಿತಿಗಳನ್ನು ಎನ್‌ಎಸ್‌ಇ ಮತ್ತು ಬಿಎಸ್‌ಇಗೆ ತಿಳಿಸಿದ್ದರು.

ಈ ಉಲ್ಲಂಘನೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ತನ್ನ ಪತ್ರದಲ್ಲಿ ಹೇಳಿರುವ ಸೆಬಿ,ಅನುಸರಣೆ ಮಾನದಂಡಗಳನ್ನು ಸುಧಾರಿಸಿಕೊಳ್ಳುವಂತೆ ಅಥವಾ ಸಂಭಾವ್ಯ ಜಾರಿ ಕ್ರಮವನ್ನು ಎದುರಿಸುವಂತೆ ಎಚ್ಚರಿಕೆ ನೀಡಿದೆ. ಸೆಬಿ ಲಿಸ್ಟಿಂಗ್ ಬಾಧ್ಯತೆಗಳು ಮತ್ತು ಬಹಿರಂಗಪಡಿಸುವಿಕೆಯ ಅಗತ್ಯಗಳ ನಿಯಮಗಳು, 2015ರಡಿ ನಾಲ್ಕು ನಿಬಂಧನೆಗಳ ಉಲ್ಲಂಘನೆಗಳನ್ನು ಉಲ್ಲೇಖಿಸಿದೆ.

ಸೆಬಿ ಎಚ್ಚರಿಕೆಯು ತನ್ನ ಹಣಕಾಸು ಸ್ಥಿತಿಯ ಮೇಲೆ ಯಾವುದೇ ವಸ್ತುಶಃ ಪರಿಣಾಮವನ್ನು ಬೀರುವುದಿಲ್ಲ ಎಂದು ಓಲಾ ಶೇರು ವಿನಿಮಯ ಕೇಂದ್ರಗಳಿಗೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News