ಆರೆಸ್ಸೆಸ್ ಕುರಿತ ಒಲವಿಗಾಗಿ ಪ್ರಣವ್ ಗೆ ರಾಜ್‌ಘಾಟ್‌ನಲ್ಲಿ ಸ್ಮಾರಕ: ದಾನಿಶ್ ಅಲಿ
ಹೊಸದಿಲ್ಲಿ : ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಸ್ಮಾರಕ ನಿರ್ಮಾಣಕ್ಕಾಗಿ ರಾಜ್ ಘಾಟ್‌ನಲ್ಲಿ ಸ್ಥಳವೊಂದನ್ನು ನಿಗದಿಪಡಿಸಿರುವುದಕ್ಕಾಗಿ ಕಾಂಗ್ರೆಸ್ ನಾಯಕ ದಾನಿಶ್ ಅಲಿ ಬುಧವಾರ ಕೇಂದ್ರದ ನರೇಂದ್ರ ಮೋದಿ ಸರಕಾರವನ್ನು ಟೀಕಿಸಿದ್ದಾರೆ.
‘‘ನರೇಂದ್ರ ಮೋದಿ ಸರಕಾರವು ಸಾವಿನ ವಿಷಯದಲ್ಲೂ ಕೊಳಕು ರಾಜಕೀಯ ಮಾಡುತ್ತಿದೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್‌ರ ಸ್ಮಾರಕಕ್ಕಾಗಿ ರಾಜ್ ಘಾಟ್‌ನಲ್ಲಿ ಸ್ಥಳ ನೀಡುವಂತೆ ಕೋರುವ ಇಡೀ ದೇಶದ ಮನವಿಯನ್ನು ಅದು ತಿರಸ್ಕರಿಸಿದೆ. ಆದರೆ, ಪ್ರಣಬ್ ಮುಖರ್ಜಿ ಅವರ ಸ್ಮಾರಕಕ್ಕೆ ಅದೇ ಸ್ಥಳದಲ್ಲಿ ಜಾಗ ನೀಡಿದೆ. ಇದು ಕೆಳ ಮಟ್ಟದ ರಾಜಕೀಯ. ಇದು ದೇಶಕ್ಕೆ ಆರ್ಥಿಕ ಕ್ರಾಂತಿಯನ್ನು ತಂದ ಪ್ರಧಾನಿಗೆ ಮಾಡಿದ ಘೋರ ಅವಮಾನವಾಗಿದೆ’’ ಎಂದು ಮಾಜಿ ಲೋಕಸಭಾ ಸದಸ್ಯ ಅಲಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
2018ರಲ್ಲಿ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಕಾರ್ಯಕ್ರಮವೊಂದರಲ್ಲಿ ಪ್ರಣಬ್ ಮುಖರ್ಜಿ ಭಾಗವಹಿಸಿರುವುದನ್ನು ಸ್ಮರಿಸಿದ ದಾನಿಶ್ ಅಲಿ, ‘‘ಇದು ಆರೆಸ್ಸೆಸ್ ಬಗ್ಗೆ ಒಲವು ಹೊಂದಿದ್ದ ಪ್ರಣಬ್ ಮುಖರ್ಜಿಗೆ ಸರಕಾರ ನೀಡಿರುವ ಉಡುಗೊರೆಯಾಗಿದೆ. ಪ್ರಣಬ್ ಮುಖರ್ಜಿ ಆರ್‌ಎಸ್‌ಎಸ್‌ನ ನಾಗಪುರ ಪ್ರಧಾನ ಕಚೇರಿಯಲ್ಲಿ ತಲೆಬಾಗಿಸಿದ್ದರು ಮತ್ತು ಆರೆಸ್ಸೆಸ್ ಸ್ಥಾಪಕ ಹೆಡಗೇವಾರ್‌ಗೆ ‘ಧರ್ತಿಪುತ್ರ’ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಸಂಸತ್ ಭವನದಲ್ಲಿ ಸಾವರ್ಕರ್‌ರ ಚಿತ್ರವನ್ನು ಹಾಕುವಲ್ಲಿ ಮುಖರ್ಜಿ ಮಹತ್ವದ ಪಾತ್ರ ವಹಿಸಿದ್ದರು’’ ಎಂದು ಹೇಳಿದರು.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ‘ರಾಷ್ಟ್ರೀಯ ಸ್ಮತಿ’ ಪ್ರದೇಶ ಆವರಣದಲ್ಲಿ ಸ್ಮಾರಕವೊಂದನ್ನು ನಿರ್ಮಿಸಲು ತಾನು ನಿರ್ಧರಿಸಿರುವುದಾಗಿ ಕೇಂದ್ರ ಸರಕಾರವು ಬುಧವಾರ ಘೋಷಿಸಿದೆ.
ಹಿರಿಯ ಕಾಂಗ್ರೆಸ್ ನಾಯಕರಾಗಿದ್ದ ಪ್ರಣಬ್ ಮುಖರ್ಜಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಪಿ.ವಿ. ನರಸಿಂಹ ರಾವ್ ಮತ್ತು ಡಾ. ಮನಮೋಹನ್ ಸಿಂಗ್‌ರ ಸರಕಾರಗಳಲ್ಲಿ ಮಹತ್ವದ ಸಚಿವ ಖಾತೆಗಳನ್ನು ಹೊಂದಿದ್ದರು.
ಅವರು 2012ರಿಂದ 2017ರವರೆಗೆ ರಾಷ್ಟ್ರಪತಿಯಾಗಿದ್ದರು. ಅವರು 2020 ಆಗಸ್ಟ್ 31ರಂದು ನಿಧನರಾಗಿದ್ದಾರೆ.