‘ವಂದೇ ಮಾತರಂ’ ನಮ್ಮ ರಾಷ್ಟ್ರಗೀತೆ ಆಗಬೇಕು: ರಾಮಗಿರಿ ಮಹಾರಾಜ್

Update: 2025-01-08 17:20 GMT

ರಾಮಗಿರಿ ಮಹಾರಾಜ್ | PC : X 

ಛತ್ರಪತಿ ಸಂಭಾಜಿನಗರ: ‘ವಂದೇ ಮಾತರಂ‘ ಭಾರತದ ರಾಷ್ಟ್ರಗೀತೆಯಾಗಬೇಕು ಎಂದು ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ಹೇಳಿದ್ದಾರೆ.

‘ಜನ ಗಣ ಮನ’ವನ್ನು ರವೀಂದ್ರನಾಥ ಟಾಗೋರ್ ಅವರು ಬೆಂಗಾಳಿಯಲ್ಲಿ ರಚಿಸಿದ್ದು, 1950,ಜ.24ರಂದು ಸಂವಿಧಾನ ಸಭೆಯು ಅದರ ಹಿಂದಿ ಅವತರಣಿಕೆಯನ್ನು ರಾಷ್ಟ್ರಗೀತೆಯನ್ನಾಗಿ ಅಳವಡಿಸಿಕೊಂಡಿತ್ತು.

1911ರಲ್ಲಿ ಕೋಲ್ಕತಾದಲ್ಲಿ ಟಾಗೋರ್ ಈ ಗೀತೆಯನ್ನು ಹಾಡಿದ್ದರು. ಆ ಸಮಯದಲ್ಲಿ ದೇಶವು ಸ್ವತಂತ್ರವಾಗಿರಲಿಲ್ಲ. ಭಾರತದಲ್ಲಿ ಅನ್ಯಾಯವೆಸಗುತ್ತಿದ್ದ ಬ್ರಿಟಿಷ್ ದೊರೆ ಜಾರ್ಜ್ ಗಿ ಅವರ ಎದುರು ಟಾಗೋರ್ ಈ ಗೀತೆಯನ್ನು ಹಾಡಿದ್ದರು. ದೇಶವನ್ನು ಸಂಬೋಧಿಸಿ ಈ ಗೀತೆಯನ್ನು ಹಾಡಿರಲಿಲ್ಲ ಎಂದು ಮಂಗಳವಾರ ಇಲ್ಲಿ ಪ್ರತಿಪಾದಿಸಿದ ರಾಮಗಿರಿ ಮಹಾರಾಜ್,‘ವಂದೇ ಮಾತರಂ ಅನ್ನು ನಮ್ಮ ರಾಷ್ಟ್ರಗೀತೆಯನ್ನಾಗಿಸಲು ನಾವು ಹೋರಾಟವನ್ನು ಆರಂಭಿಸಬೇಕಿದೆ. ವಂದೇ ಮಾತರಂ ನಮ್ಮ ರಾಷ್ಟ್ರಗೀತೆ ಆಗಲೇಬೇಕು’ ಎಂದರು.

ಬಳಿಕ, ವಿವಾದಾತ್ಮಕ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಮಗಿರಿ ಮಹಾರಾಜ್, ಇದು ಗೌರವ ಅಥವಾ ಅಗೌರವದ ಕುರಿತು ವಿಷಯವಲ್ಲ. ಸತ್ಯವನ್ನು ಹೇಳುವ ಕುರಿತಾಗಿದೆ. ಸತ್ಯವನ್ನು ಹೇಳುವುದು ಅಗೌರವ ಎಂದಾದರೆ ಅದು ದುರದೃಷ್ಟಕರ ಎಂದು ಹೇಳಿದರು.

ಮುಂಬರುವ ‘ಮಿಷನ್ ಅಯೋಧ್ಯಾ’ಚಿತ್ರದ ಟ್ರೇಲರ್ ಬಿಡುಗಡೆಗಾಗಿ ಅವರು ಇಲ್ಲಿಗೆ ಆಗಮಿಸಿದ್ದರು.

ಕಳೆದ ವರ್ಷ ಪ್ರವಾದಿ ಮುಹಮ್ಮದ್ ಮತ್ತು ಇಸ್ಲಾಮ್ ಕುರಿತು ಆಕ್ಷೇಪಾರ್ಹ ಹೇಳಿಕೆಗಳ ಮೂಲಕ ರಾಮಗಿರಿ ಮಹಾರಾಜ್ ವಿವಾದಕ್ಕೆ ಕಾರಣರಾಗಿದ್ದರು. ಮಹಾರಾಷ್ಟ್ರದಲ್ಲಿ ಅವರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ದವು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News