ಉತ್ತರ ಪ್ರದೇಶ | ಟ್ರಾನ್ಸ್ ಫಾರ್ಮರ್ ಕಳ್ಳತನ: 25 ದಿನಗಳ ಕಾಲ ಕತ್ತಲಲ್ಲಿ ಮುಳುಗಿದ ಗ್ರಾಮ!

Update: 2025-01-08 15:11 GMT

ಸಾಂದರ್ಭಿಕ ಚಿತ್ರ | PC : PTI

ಬುದೌನ್: 250 ಕೆವಿಎ ಟ್ರಾನ್ಸ್ ಫಾರ್ಮರ್ ಕಳ್ಳತನವಾಗಿದ್ದರಿಂದ ಸೋರಾಹ ಗ್ರಾಮಸ್ಥರು ಸುಮಾರು ಒಂದು ತಿಂಗಳಿನಿಂದ ಕತ್ತಲಿನಲ್ಲಿ ಮುಳುಗಿರುವ ಘಟನೆ ನಡೆದಿದೆ.

ಸ್ಥಳೀಯರು ಹಾಗೂ ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದ ಉಘೈತಿ ಪ್ರದೇಶದಲ್ಲಿ ಟ್ರಾನ್ಸ್ ಫಾರ್ಮರ್ ಅನ್ನು ಕಳಚಿರುವ ಕಳ್ಳರು, ಅದರಲ್ಲಿನ ತೈಲ ಹಾಗೂ ಇನ್ನಿತರ ಬೆಲೆಬಾಳುವ ಬಿಡಿಭಾಗಗಳನ್ನು ಕದ್ದುಕೊಂಡು ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಈ ಘಟನೆ ಕುರಿತು ಇಂಧನ ಇಲಾಖೆಯು ತನಿಖೆಗೆ ಆದೇಶಿಸಿದ್ದರೂ, 25 ಕಳೆದ ನಂತರವೂ ಅದಿನ್ನೂ ಹೊಸ ಟ್ರಾನ್ಸ್ ಫಾರ್ಮರ್ ಅನ್ನು ಅಳವಡಿಸಬೇಕಿದೆ. ಅಲ್ಲದೆ ಪೊಲೀಸರಿಗೂ ಕಳ್ಳರನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ.

ಈ ಕಳ್ಳತನದ ನಂತರ, ಸುಮಾರು 5,000 ಜನಸಂಖ್ಯೆಯನ್ನು ಹೊಂದಿರುವ ಗ್ರಾಮವು ಕತ್ತಲಲ್ಲಿ ಮುಳುಗಿದೆ. ಈ ಘಟನೆಯಿಂದ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಉತ್ತರ ಪ್ರದೇಶ ಮಂಡಳಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ಹೆಚ್ಚು ತೊಂದರೆಗೊಳಗಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಉಘೈಟಿ ವಿದ್ಯುತ್ ಉಪ ಪ್ರಸರಣ ಕೇಂದ್ರದಲ್ಲಿ ನಿಯೋಜಿತರಾಗಿರುವ ಕಿರಿಯ ಇಂಜಿನಿಯರ್ ಅಶೋಕ್ ಕುಮಾರ್, ಹೊಸ ಟ್ರಾನ್ಸ್ ಫಾರ್ಮರ್ ಸದ್ಯದಲ್ಲೇ ಬರಲಿದೆ ಎಂದು ಭರವಸೆ ನೀಡಿದ್ದಾರೆ.

“ಟ್ರಾನ್ಸ್ ಫಾರ್ಮರ್ ಕಳ್ಳತನದ ಸಂಬಂಧ ದೂರನ್ನು ದಾಖಲಿಸಲಾಗಿದ್ದು, ರಿಪೇರಿ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಿ ಕೊಡಲಾಗಿದೆ. ಇನ್ನೊಂದೆರಡು ದಿನಗಳಲ್ಲಿ ಹೊಸ ಟ್ರಾನ್ಸ್ ಫಾರ್ಮರ್ ಅನ್ನು ಅಳವಡಿಸಲಾಗುವುದು’ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News