ವಿವಿಗಳ ಕುಲಪತಿ, ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ನೇರ ನೇಮಕ: ಯುಜಿಸಿ ಪ್ರಸ್ತಾವ

Update: 2025-01-08 14:50 GMT

UGC | PC : PTI 

ಹೊಸದಿಲ್ಲಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗವು ರೂಪಿಸಿರುವ ಕರಡು ನಿಯಮಗಳ ಪ್ರಕಾರ ಕನಿಷ್ಠ 10 ವರ್ಷಗಳ ಅನುಭವವನ್ನು ಹೊಂದಿರುವ ಉದ್ಯಮರಂಗದ ಪರಿಣತರು, ಸಾರ್ವಜನಿಕ ಆಡಳಿತ, ನೀತಿ ನಿರೂಪಣೆಯಲ್ಲಿ ಕಾರ್ಯ ನಿರ್ವಹಿಸಿದವರು ಮತ್ತು ಸರಕಾರಿ ಸ್ವಾಮ್ಯದ ಸಂಸ್ಥೆಗಳ ಹಿರಿಯ ಅಧಿಕಾರಿಗಳು ವಿವಿಗಳ ಕುಲಪತಿಗಳಾಗಿ ನೇಮಕಗೊಳ್ಳಲು ಶೀಘ್ರವೇ ಅರ್ಹರಾಗಲಿದ್ದಾರೆ.

ನೂತನ ಮಾರ್ಗಸೂಚಿಗಳು ವಿವಿಗಳಲ್ಲಿ ಬೋಧಕ ಸಿಬ್ಬಂದಿಗಳ ನೇಮಕಾತಿಗಾಗಿ ನಿಯಮಗಳಿಗೂ ತಿದ್ದುಪಡಿಗಳನ್ನು ತರಲಿವೆ. ಕನಿಷ್ಠ ಶೇ.55 ಅಂಕಗಳೊಂದಿಗೆ ಇಂಜಿನಿಯರಿಂಗ್ ಸ್ನಾತಕೋತ್ತರ (ಎಂಇ) ಮತ್ತು ತಂತ್ರಜ್ಞಾನ ಸ್ನಾತಕೋತ್ತರ (ಎಂಟೆಕ್) ಪದವಿಗಳನ್ನು ಹೊಂದಿರುವವರು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರವಾಗಿ ನೇಮಕಗೊಳ್ಳಲಿದ್ದಾರೆ. ಇದಕ್ಕಾಗಿ ಅವರು ಯುಜಿಸಿ-ನೆಟ್ ಪರೀಕ್ಷೆಗೆ ಹಾಜರಾಗಬೇಕಾದ ಅಗತ್ಯವಿರುವುದಿಲ್ಲ.

ಪ್ರಾಧ್ಯಾಪಕರು ತಾವು ಅತ್ಯುನ್ನತ ಶಿಕ್ಷಣ ಪಡೆದ ವಿಷಯದಲ್ಲಿ ಮಾತ್ರ ಬೋಧನೆ ಮಾಡಲು ಕರಡು ನಿಯಮಗಳು ಅವಕಾಶವನ್ನು ಒದಗಿಸಲಿವೆ. ಉದಾಹರಣೆಗೆ ಪ್ರಾಧ್ಯಾಪಕರೋರ್ವರು ರಾಸಾಯನಿಕ ಶಾಸ್ತ್ರದಲ್ಲಿ ಪಿಎಚ್‌ಡಿ, ಗಣಿತ ಶಾಸ್ತ್ರದಲ್ಲಿ ಪದವಿ ಮತ್ತು ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೆ, ಅವರು ರಾಸಾಯನಿಕ ಶಾಸ್ತ್ರ ವಿಷಯವನ್ನು ಮಾತ್ರ ಬೋಧಿಸಬಹುದು.

ಇದೇ ರೀತಿ,ತಮ್ಮ ಸ್ನಾತಕೋತ್ತರ ಪದವಿ ಶಿಕ್ಷಣವಲ್ಲದ ಬೇರೆ ವಿಷಯದಲ್ಲಿ ಎನ್‌ಐಟಿ ತೇರ್ಗಡೆಯಾದವರು ತಾವು ಎನ್‌ಇಟಿಗೆ ಅರ್ಹತೆ ಪಡೆದ ವಿಷಯದಲ್ಲಿ ಬೋಧನೆ ಮಾಡಬಹುದು.

2018ರ ಮಾರ್ಗಸೂಚಿಗಳ ಬದಲು ಯುಜಿಸಿ ನಿಯಮಗಳು, 2025 ಅಸ್ತಿತ್ವಕ್ಕೆ ಬರಲಿವೆ ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದರು.

ಹಾಲಿ ಇರುವಂತೆ ಕುಲಪತಿಗಳ ಹುದ್ದೆಗೆ ಅಭ್ಯರ್ಥಿಗಳು ವಿವಿಯಲ್ಲಿ ಅಥವಾ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಲ್ಲಿ ಅಥವಾ ಶೈಕ್ಷಣಿಕ ಆಡಳಿತಾಧಿಕಾರಿಯಾಗಿ ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು.

ಪರಿಷ್ಕೃತ ನಿಯಮಗಳು ಕಟ್ಟುನಿಟ್ಟಾದ ಅರ್ಹತೆಗಿಂತ ಜ್ಞಾನ ಮತ್ತು ಸಮುದಾಯಕ್ಕೆ ಕೊಡುಗೆಗಳನ್ನು ಮೌಲ್ಯೀಕರಿಸುವುದನ್ನು ಖಚಿತಪಡಿಸುತ್ತವೆ ಎಂದು ಕುಮಾರ ತಿಳಿಸಿದರು.

ಅರ್ಥಶಾಸ್ತ್ರಜ್ಞ ಅಜಿತ ರಾನಡೆ ಅವರನ್ನು ಪುಣೆಯ ಗೋಖಲೆ ಇನ್‌ಸ್ಟಿಟ್ಯೂಟ್ ಆಫ್ ಪಾಲಿಟಿಕ್ಸ್ ಆ್ಯಂಡ್ ಇಕನಾಮಿಕ್ಸ್‌ನ ಕುಲಪತಿ ಹುದ್ದೆಯಿಂದ ತೆಗೆದುಹಾಕಿದ ಹಲವು ತಿಂಗಳುಗಳ ಬಳಿಕ ಈ ಹೊಸ ಮಾರ್ಗಸೂಚಿಗಳು ಬಂದಿವೆ. ತನ್ನ ಕ್ಷೇತ್ರದಲ್ಲಿ ವ್ಯಾಪಕ ಪರಿಣತಿಯನ್ನು ಹೊಂದಿದ್ದರೂ ಅಗತ್ಯವಿದ್ದ 10 ವರ್ಷಗಳ ಬೋಧನೆ ಮತ್ತು ಶೈಕ್ಷಣಿಕ ಸಂಶೋಧನಾ ಅನುಭವದ ಕೊರತೆಯಿಂದಾಗಿ ಅವರನ್ನು ಹುದ್ದೆಯಿಂದ ತೆಗೆಯಲಾಗಿತ್ತು. ಬಾಂಬೆ ಉಚ್ಛ ನ್ಯಾಯಾಲಯವು ರಾನಡೆಯವರನ್ನು ಹುದ್ದೆಯಲ್ಲಿ ಮರುಸ್ಥಾಪಿಸಿತ್ತಾದರೂ ಅವರು ನವಂಬರ್‌ನಲ್ಲಿ ಸ್ವಯಂಪ್ರೇರಣೆಯಿಂದ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು.

ಕರಡು ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ನೂತನ ಶಿಕ್ಷಣ ನೀತಿ 2020 ಅನುಷ್ಠಾನಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಸುಧಾರಣೆಗಳ ಸಮಯೋಚಿತ ಸುಧಾರಣೆಗಳಿಗೆ ಒತ್ತು ನೀಡುತ್ತ,‘ಹೊಂದಾಣಿಕೆ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಹಾಗೂ ವೈವಿಧ್ಯಮಯ ಪ್ರತಿಭೆಗಳನ್ನು ಗುರುತಿಸುವ ಮೂಲಕ ನಾವು ಭಾರತದ ಕ್ರಿಯಾತ್ಮಕ ಶೈಕ್ಷಣಿಕ ಭವಿಷ್ಯಕ್ಕೆ ಮಾರ್ಗವನ್ನು ಕಲ್ಪಿಸುತ್ತಿದ್ದೇವೆ’ ಎಂದು ಹೇಳಿದರು.

ಕರಡು ನಿಯಮಗಳು ವಿನೂತನ ಬೋಧನಾ ಪದ್ಧತಿಗಳು,ಡಿಜಿಟಲ್ ಕಂಟೆಂಟ್ ಸೃಷ್ಟಿ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕೊಡುಗೆಗಳಂತಹ ವೃತ್ತಿಪರ ಸಾಧನೆಗಳನ್ನು ಗುರುತಿಸುವ ನಿಬಂಧನೆಗಳನ್ನು ಪರಿಚಯಿಸುವ ಮೂಲಕ ಅರ್ಹತೆಗಳ ವ್ಯಾಪ್ತಿಯನ್ನೂ ವಿಸ್ತರಿಸುತ್ತವೆ.

ಬೋಧಕ ಸಿಬ್ಬಂದಿಗಳಿಗೆ ಬಡ್ತಿಗಳಿಗೆ ಬಳಸಲಾಗುತ್ತಿದ್ದ ಶೈಕ್ಷಣಿಕ ಕಾರ್ಯಕ್ಷಮತೆ ಸೂಚಕ (ಎಪಿಐ) ವನ್ನೂ ನೂತನ ಮಾರ್ಗಸೂಚಿಗಳು ಕೈಬಿಟ್ಟಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News