ಕೊಚ್ಚಿ | ಪಾಳುಬಿದ್ದ ಮನೆಯೊಂದರ ಫ್ರಿಡ್ಜ್ ನಲ್ಲಿ ಮಾನವ ತಲೆಬುರುಡೆ, ಅಸ್ಥಿಪಂಜರದ ಭಾಗಗಳು ಪತ್ತೆ!
ಕೊಚ್ಚಿ: ಪಾಳುಬಿದ್ದ ಮನೆಯೊಂದರಲ್ಲಿದ್ದ ಒಡೆದಿದ್ದ ಫ್ರಿಡ್ಜ್ ನಲ್ಲಿ ಮಾನವ ತಲೆಬುರುಡೆ ಮತ್ತು ಅಸ್ಥಿಪಂಜರದ ಭಾಗಗಳು ಪತ್ತೆಯಾಗಿದ್ದು, ಚೊಟ್ಟನಿಕ್ಕಾರ ಪೊಲೀಸರು ಈ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ. ಶೈಕ್ಷಣಿಕ ಉದ್ದೇಶಗಳಿಗಾಗಿ ಅವುಗಳನ್ನು ಬಳಸಿರಬಹುದು ಎಂದು ಕೂಡ ಶಂಕಿಸಲಾಗಿದೆ.
ಈ ಮೂಳೆಗಳು ಹಲವು ವರ್ಷಗಳಿಂದ ಬಳಕೆಯಲ್ಲಿರಬಹುದಾಗಿದ್ದು, ಫೋರೆನ್ಸಿಕ್ ವಿಶ್ಲೇಷಣೆಯ ಮೂಲಕ ನಿಖರವಾದ ವಯಸ್ಸನ್ನು ಪರಿಶೀಲಿಸಬೇಕಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಧಿವಿಜ್ಞಾನ ತಂಡವು ತಲೆಬುರುಡೆ ಮತ್ತು ಅಸ್ಥಿಪಂಜರದ ಭಾಗಗಳನ್ನು ಪರೀಕ್ಷಿಸಿದೆ, ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಅವುಗಳನ್ನು ಶೈಕ್ಷಣಿಕ ಉದ್ದೇಶಗಳಿಗಾಗಿ ಬಳಸಿರುವ ಸಾಧ್ಯತೆ ಇದೆ. ಅಸ್ಥಿಪಂಜರ, ತಲೆಬುರುಡೆ ಮಹಿಳೆಯರದ್ದು, ಆದರೆ ಅವುಗಳು ಒಬ್ಬರದ್ದಲ್ಲ. ಅವುಗಳ ವಯಸ್ಸು ಮತ್ತು ಮೂಲವನ್ನು ಪತ್ತೆ ಹಚ್ಚುವುದು ಕಠಿಣವಾದರೂ ಈ ಬಗ್ಗೆ ಕೂಡ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಎರುವೇಲಿ ಪೂರ್ವದ ಚೊಟ್ಟಣಿಕ್ಕರ ಅರಮನೆ ಚೌಕದಲ್ಲಿರುವ 14 ಎಕರೆ ಜಾಗದಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಮೂಳೆಗಳು ಪತ್ತೆಯಾಗಿವೆ. ಕಳೆದ 20 ವರ್ಷಗಳಿಂದ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಮನೆಗೆ ಮೂಳೆಗಳು ಹೇಗೆ ಬಂದಿವೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ, ಮನೆಯ ಮಾಲಕರು, ವೈದ್ಯರು, ಅವರ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಳು ಬಿದ್ದ ಮನೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ಸ್ಥಳೀಯ ಪಾಲಿಕೆ ಸದಸ್ಯೆ ಇಂದಿರಾ ಧರ್ಮರಾಜನ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಮನೆಯನ್ನು ಪರಿಶೀಲನೆ ನಡೆಸಿದ್ದಾರೆ. ಮೂಳೆಗಳು ಪತ್ತೆಯಾದ ನಂತರ ಚೊಟ್ಟನಿಕ್ಕರ ಪೊಲೀಸರು ಬಿಎನ್ಎಸ್ ಕಾಯ್ದೆಯಡಿಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ.