'ಎಮರ್ಜೆನ್ಸಿʼ ಚಿತ್ರ ವೀಕ್ಷಣೆಗೆ ಪ್ರಿಯಾಂಕಾ ಗಾಂಧಿಗೆ ಆಹ್ವಾನಿಸಿದ ಕಂಗನಾ ರಣಾವತ್
ಮುಂಬೈ: ವಿವಾದಗಳ ಬಳಿಕ 'ಎಮರ್ಜೆನ್ಸಿʼ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ನಟಿ ಕಂಗನಾ ರಣಾವತ್ ಅವರು ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ 'ಎಮರ್ಜೆನ್ಸಿ ಚಿತ್ರ ವೀಕ್ಷಣೆಗೆ ಆಹ್ವಾನವನ್ನು ನೀಡಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರು ಘೋಷಿಸಿದ್ದ ತುರ್ತು ಪರಿಸ್ಥಿತಿಯನ್ನು ʼಎಮರ್ಜೆನ್ಸಿʼ ಚಿತ್ರವು ಆಧರಿಸಿದೆ. ಚಿತ್ರದಲ್ಲಿ ನಟಿ ಕಂಗನಾ ರಣಾವತ್ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 6 ರಂದು ಚಿತ್ರ ಬಿಡುಗಡೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ನಿಂದ ಚಿತ್ರವು ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯಲು ಸಾಧ್ಯವಾಗದ ಕಾರಣ ಬಿಡುಗಡೆ ಮುಂದೂಡಲಾಗಿತ್ತು. ಚಿತ್ರದಲ್ಲಿ ಸಿಖ್ ಸಮುದಾಯವನ್ನು ಗುರಿಯಾಗಿಸಲಾಗಿದೆ. ಸತ್ಯವನ್ನು ತಿರುಚಲಾಗಿದೆ ಎಂದು ಶಿರೋಮಣಿ ಅಕಾಲಿದಳ ಸೇರಿದಂತೆ ಸಿಖ್ ಸಂಘಟನೆಗಳು ಆರೋಪಿಸಿದ್ದವು. ನಂತರ ಎಮರ್ಜೆನ್ಸಿಯ ಸುತ್ತ ವಿವಾದ ಭುಗಿಲೆದ್ದಿತ್ತು. ಚಿತ್ರದ ನಿರ್ದೇಶಕಿ ಮತ್ತು ನಿರ್ಮಾಪಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ಕಂಗನಾ, ಜನವರಿ 17ರಂದು ಚಿತ್ರ ಬಿಡುಗಡೆಗಾಗಿ ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.
ನಾನು ಸಂಸತ್ತಿನಲ್ಲಿ ಪ್ರಿಯಾಂಕಾ ಗಾಂಧಿಯನ್ನು ಭೇಟಿ ಮಾಡಿದ್ದೇನೆ ಮತ್ತು ನಾನು ಅವರಿಗೆ 'ಎಮರ್ಜೆನ್ಸಿ ಚಿತ್ರ ವೀಕ್ಷಿಸುವಂತೆ ಹೇಳಿದ್ದೇನೆ. ಮತ್ತು ನೀವು ಆ ಸಿನಿಮಾವನ್ನು ಇಷ್ಟ ಪಡುತ್ತೀರಿ ಎಂದು ಹೇಳಿದೆ. ಅವರು ನಯವಾಗಿ ಪ್ರತಿಕ್ರಿಯಿಸಿ ಬಹುಶಃ ಎಂದರು. ಇದು ಒಂದು ಘಟನೆ ಮತ್ತು ವ್ಯಕ್ತಿತ್ವದ ಅತ್ಯಂತ ಸೂಕ್ಷ್ಮ ಮತ್ತು ಬುದ್ಧಿವಂತ ಚಿತ್ರಣವಾಗಿದೆ ಎಂದು ನಾನು ನಂಬುತ್ತೇನೆ. ಇಂದಿರಾ ಗಾಂಧಿಯನ್ನು ಘನತೆಯಿಂದ ಚಿತ್ರಿಸಲು ನಾನು ಹೆಚ್ಚಿನ ಕಾಳಜಿ ವಹಿಸಿದ್ದೇನೆ ಎಂದು ಕಂಗನಾ ಹೇಳಿದ್ದಾರೆ.
ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಭವಿಸಿದ ಕೆಲವು ಘಟನೆಗಳನ್ನು ಹೊರತುಪಡಿಸಿ, ಅವರು ಬಹಳ ಪ್ರೀತಿಪಾತ್ರರಾದವರು ಎಂದು ನಾನು ಭಾವಿಸುತ್ತೇನೆ. ಮೂರು ಬಾರಿ ಪ್ರಧಾನಿಯಾಗುವುದು ತಮಾಷೆಯಲ್ಲ. ಅವರು ಪ್ರೀತಿ ಪಾತ್ರರಾದವರು ಮತ್ತು ಜನರ ಮನ್ನಣೆಯನ್ನು ಗಳಿಸಿದ್ದರು ಎಂದು ಕಂಗನಾ ರಾಣಾವತ್ ಹೇಳಿದ್ದಾರೆ.