ವಧು-ವರರಂತೆ ಶೃಂಗರಿಸಿಕೊಂಡು ಮಧ್ಯರಾತ್ರಿವರೆಗೆ 26ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದ ದಂಪತಿ ಆತ್ಮಹತ್ಯೆ

Update: 2025-01-08 13:40 GMT
PC : timesofindia.indiatimes.com

ನಾಗಪುರ: ವಧು-ವರರಂತೆ ಶೃಂಗರಿಸಿಕೊಂಡು ಸ್ನೇಹಿತರೊಂದಿಗೆ ಮಧ್ಯರಾತ್ರಿವರೆಗೆ ತಮ್ಮ 26ನೇ ವಿವಾಹ ವಾರ್ಷಿಕೋತ್ಸವದ ಔತಣ ಕೂಟ ನಡೆಸಿರುವ ದಂಪತಿಗಳು, ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಮುಂಜಾನೆ ನಡೆದಿದೆ ಎಂದು ವರದಿಯಾಗಿದೆ.

ವಿವಾಹೋತ್ಸವದಲ್ಲಿ ವಧು-ವರರ ದಿರಿಸಿನಲ್ಲಿ ಸಿಂಗರಿಸಿಕೊಂಡಿದ್ದ ದಂಪತಿಗಳು, ತಮ್ಮ ನಿವಾಸದಲ್ಲಿ ಆಯೋಜನೆಗೊಂಡಿದ್ದ ಔತಣ ಕೂಟದಲ್ಲಿ ಯಾವುದೇ ಮೋಜು, ತಮಾಷೆ, ನಗುವಿಲ್ಲದೆ ಭಾಗಿಯಾಗಿದ್ದಾರೆ. ಆದರೆ, ಕೆಲವೇ ಕ್ಷಣಗಳಲ್ಲಿ ಆತ್ಮಹತ್ಯೆಗೆ ಶರಣಾಗಿ ಎಲ್ಲರನ್ನೂ ಆಘಾತಕ್ಕೆ ದೂಡಿದ್ದಾರೆ.

57 ವರ್ಷದ ಜೆರಿಲ್ ಡ್ಯಾಮ್ಸನ್ ಆಸ್ಕರ್ ಮಾಂಕ್ರಿಫ್ ರ ಮೃತ ದೇಹವು ಅಡುಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಅವರ ಪತ್ನಿ ಆ್ಯನೆ (46) ದೇಹವು ಹಾಸಿಗೆಯ ಮೇಲೆ ನಿರ್ಜೀವ ಸ್ಥಿತಿಯಲ್ಲಿ ಪತ್ತೆಯಾಗಿದೆ. 26 ವರ್ಷಗಳ ಹಿಂದೆ ವಿವಾಹವಾಗಿದ್ದಾಗ ಧರಿಸಿದ್ದ ವಧುವಿನ ದಿರಿಸು ಧರಿಸಿದ್ದ ಆ್ಯನೆಯನ್ನು ಬಿಳಿ ಬಟ್ಟೆಯಲ್ಲಿ ಸುತ್ತಿಟ್ಟು, ಅದರ ಮೇಲೆ ಹೂಗಳನ್ನು ಚೆಲ್ಲಲಾಗಿತ್ತು. ಬಹುಶಃ ಜೆರಿಲ್ ಮೊದಲು ತನ್ನ ಪತ್ನಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ನೀಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯನ್ನು ನೇಣಿನ ಹಗ್ಗದಿಂದ ಕೆಳಗಿಳಿಸಿರುವ ಜೆರಿಲ್, ಆಕೆಯನ್ನು ಬಟ್ಟೆಯಲ್ಲಿ ಸುತ್ತಿಟ್ಟು, ಅದರ ಮೇಲೆ ಹೂಗಳನ್ನು ಚೆಲ್ಲಿ, ನಂತರ ತಾವೂ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಂತ್ಯಕ್ರಿಯೆ ನೆರವೇರಿಸಲು ದಂಪತಿಗಳ ಮೃತ ದೇಹಗಳನ್ನು ಪೋಷಕರ ವಶಕ್ಕೆ ಒಪ್ಪಿಸುವುದಕ್ಕೂ ಮುನ್ನ, ದಂಪತಿಗಳ ಮೃತ ದೇಹಗಳ ಮರಣೋತ್ತರ ಪರೀಕ್ಷೆಯನ್ನು ಮೇಯೋ ಆಸ್ಪತ್ರೆಯಲ್ಲಿ ನಡೆಸಲಾಯಿತು. ಈ ಸಂಬಂಧ ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ದಂಪತಿಗಳ ಮೊಬೈಲ್ ಫೋನ್ ಗಳನ್ನು ವಿಶ್ಲೇಷಣೆಗಾಗಿ ಪ್ರಾಂತೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News