ಸೇನಾಧಿಕಾರಿಯ ಸೋಗಿನಲ್ಲಿ ಮಹಿಳೆಯರಿಗೆ ಲಕ್ಷಾಂತರ ರೂ. ವಂಚಿಸಿದ್ದ ವ್ಯಕ್ತಿಯೀಗ ಪೊಲೀಸ್ ಅತಿಥಿ!
ಲಕ್ನೊ: ಸೇನಾ ಕ್ಯಾಪ್ಟನ್ ಸೋಗಿನಲ್ಲಿ ಮಹಿಳೆಯರೊಂದಿಗೆ ಸಂಬಂಧ ಬೆಳೆಸಿ, ನಂತರ ಅವರಿಗೆ ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದ ಆರೋಪದ ಮೇಲೆ 40 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೂಲತಃ ಒಡಿಶಾದ ಬಾಲಸೋರ್ ಜಿಲ್ಲೆಯ ಹೈದರ್ ಅಲಿ ಎಂದು ಗುರುತಿಸಲಾಗಿದ್ದು, ಆತ ತನ್ನನ್ನು ತಾನು ಆರ್ಮಿ ಮೆಡಿಕಲ್ ಕಾರ್ಪ್ಸ್ ನಲ್ಲಿ ಅಧಿಕಾರಿ ಹಾರ್ದಿಕ್ ಬೆಗ್ಲೊ ಎಂದು ಪರಿಚಯಿಸಿಕೊಂಡು, ಮಹಿಳೆಯರೊಂದಿಗೆ ಸಂಬಂಧ ಬೆಳೆಸುತ್ತಿದ್ದ. ನಂತರ ವಿವಿಧ ಕಾರಣಗಳನ್ನು ಮುಂದು ಮಾಡಿ ಅವರ ಬಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಣ ಪಡೆದ ನಂತರ, ಅವರೊಂದಿಗಿನ ಸಂಬಂಧ ಕಡಿದುಕೊಂಡು ಮತ್ತೊಂದು ರಾಜ್ಯಕ್ಕೆ ತೆರಳಿ, ಹೊಸ ಬಲಿಪಶುಗಾಗಿ ಬಲೆ ಬೀಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಈತ ವಂಚನೆಯ ಹಣದಿಂದ ಐಶಾರಾಮಿ ಜೀವನ ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಲಕ್ನೊದಲ್ಲಿ ಮಹಿಳೆಯೊಬ್ಬರನ್ನು ಭೇಟಿ ಮಾಡಿ, ಆಕೆ ಆತನ ಬಗ್ಗೆ ಸಂಶಯಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ತನಿಖೆ ಪ್ರಾರಂಭಗೊಂಡಿದೆ. ವಿಚಾರಣೆಯ ಸಂದರ್ಭದಲ್ಲಿ ಆತ ಬಹಿರಂಗಪಡಿಸಿದ ವಿಷಯಗಳಿಂದ ಪೊಲೀಸರು ಆಘಾತಗೊಂಡಿದ್ದಾರೆ. ಹೈದರ್ ಅಲಿ ಹೈದರಾಬಾದ್, ಕೇರಳ, ಕರ್ನಾಟಕ, ಪಶ್ಚಿಮ ಬಂಗಾಳ ಹಾಗೂ ಉತ್ತರ ಪ್ರದೇಶ ಸೇರಿದಂತೆ ಹಲವಾರು ನಗರಗಳಲ್ಲಿನ ಭದ್ರತಾ ಸಂಸ್ಥೆಗಳಲ್ಲಿ ಕೆಲಸ ಮಾಡಿರುವುದು ವಿಚಾರಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಈ ಎಲ್ಲ ನಗರಗಳಲ್ಲೂ ಮಹಿಳೆಯರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಆರೋಪಿ ಹೈದರ್ ಅಲಿ, ನಂತರ ಅಲ್ಲಿಂದ ಪರಾರಿಯಾಗುತ್ತಿದ್ದ ಎಂದು ಹೇಳಲಾಗಿದೆ.
ಇನ್ಸ್ಟಾಗ್ರಾಮ್ ನ ವಿವಿಧ ಖಾತೆಗಳಲ್ಲಿ ‘indiancommandoharik’, ‘armanbeglo’, armybeblo’, ‘soldiers3889’ ಎಂಬ ಹೆಸರುಗಳಲ್ಲಿ ಸೇನಾ ಸಮವಸ್ತ್ರ ಧರಿಸಿದ ತನ್ನ ಭಾವಚಿತ್ರಗಳನ್ನು ಆರೋಪಿ ಪೋಸ್ಟ್ ಮಾಡುತ್ತಿದ್ದುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಆರೋಪಿಯು ನನ್ನನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದು, ನಂತರ ಹಣ ವಂಚಿಸಿದ್ದಾನೆ ಎಂದು ದೂರದಾರ ಮಹಿಳೆಯು ಪೊಲೀಸರಿಗೆ ತಿಳಿಸಿದ್ದಾರೆ. ನಾವು ಆರೋಪಿಯನ್ನು ಬಂಧಿಸಿದ್ದು, ಆತನ ಮೂಲ ಹೆಸರು ಹೈದರ್ ಅಲಿ ಬೇಗ್ ಆಗಿದೆ. ಆತ ತನ್ನನ್ನು ತಾನು ಹಾರ್ದಿಕ್ ಬೆಗ್ಲೊ ಎಂದು ಪರಿಚಯಿಸಿಕೊಳ್ಳುತ್ತಿದ್ದ ಹಾಗೂ ಹಲವಾರು ಮಹಿಳೆಯರೊಂದಿಗೆ ಸಂಬಂಧ ಬೆಳೆಸಿ, ಅವರಿಗೆ ವಂಚಿಸುತ್ತಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿಪುಣ್ ಅಗರ್ವಾಲ್ ತಿಳಿಸಿದ್ದಾರೆ.
ಆರೋಪಿಯ ಮೊಬೈಲ್ ಕರೆಗಳನ್ನು ಪರಿಶೀಲಿಸಲಾಗುತ್ತಿದ್ದು, ಆತ ವಂಚಿಸಿರುವ ಮಹಿಳೆಯರನ್ನು ಪತ್ತೆ ಹಚ್ಚಲು ಪ್ರಯತ್ನಿಸಲಾಗುತ್ತಿದೆ. ಆತ ಇಲ್ಲಿಯವರೆಗೆ ನಾಲ್ವರು ಮಹಿಳೆಯರ ಕುರಿತು ಮಾಹಿತಿ ನೀಡಿದ್ದಾನೆ ಎಂದೂ ಅವರು ಹೇಳಿದ್ದಾರೆ.