ಆರ್‌ಟಿಐ ಅರ್ಜಿಗಳ ಸ್ಥಿತಿಗತಿ ತಿಳಿದುಕೊಳ್ಳಲು ಅಡ್ಡಿಯಾಗುತ್ತಿರುವ ಒಟಿಪಿ ಸಮಸ್ಯೆ
ಹೊಸದಿಲ್ಲಿ: ಆರ್‌ಟಿಐ ಪೋರ್ಟಲ್ ಬಳಸಿ ಕಾಯ್ದೆಯಡಿ ತಾವು ಸಲ್ಲಿಸಿರುವ ಅರ್ಜಿಗಳ ಸ್ಥಿತಿಗತಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವ ಕಾರ್ಯಕರ್ತರು ಒಟಿಪಿ ಸಮಸ್ಯೆಯಿಂದ ಹೈರಾಣಾಗಿದ್ದಾರೆ. ಒಟಿಪಿ ವ್ಯವಸ್ಥೆಯು ಅಸಮಂಜಸವಾಗಿ ಕಾರ್ಯ ನಿರ್ವಹಿಸುತ್ತಿದ್ದು, ದಾಖಲೆಗಳನ್ನು ನೋಡಲು ಅಡ್ಡಿಯನ್ನುಂಟು ಮಾಡುತ್ತಿದೆ.
ಇಮೇಲ್ ಮೂಲಕ ಒಟಿಪಿ ಫೀಚರ್ ತುಂಬ ವಿಳಂಬವಾಗಿ, ಅದೂ ವಿರಳವಾಗಿ ಕಾರ್ಯಾಚರಿಸುತ್ತಿದೆ ಅಥವಾ ವಿಚಾರಣೆಗಳು ಮತ್ತು ಉತ್ತರಗಳ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಅಡ್ಡಿಯನ್ನುಂಟು ಮಾಡುತ್ತಿದೆ ಎಂದು ಸರಕಾರಿ ಇಲಾಖೆಗಳಿಂದ ಮಾಹಿತಿಗಳನ್ನು ಪಡೆದುಕೊಳ್ಳಲು ವರ್ಷಗಳಿಂದಲೂ ಆರ್‌ಟಿಐ ಪೋರ್ಟಲ್ ಬಳಸಿರುವ ಮೂವರು ಕಾರ್ಯಕರ್ತರು ಸುದ್ದಿಸಂಸ್ಥೆಗೆ ತಿಳಿಸಿದರು.
‘ಕಳೆದ ಮೂರು ದಿನಗಳಿಂದಲೂ ನಮ್ಮ ವಿಚಾರಣೆಗಳ ಕುರಿತು ತಿಳಿದುಕೊಳ್ಳಲು ಹಲವಾರು ಸಲ ಪ್ರಯತ್ನಿಸಿದ್ದೇವೆ ಮತ್ತು ಸೆಕೆಂಡ್‌ಗಳಲ್ಲಿ ಒಟಿಪಿ ಬಂದ ಸಂದರ್ಭಗಳಲ್ಲಿ ಪರದೆ ಸ್ಥಗಿತಗೊಂಡಂತೆ ಕಂಡು ಬರುತ್ತದೆ’ ಎಂದು ಅವರು ಹೇಳಿದರು.
ಇದು ಹೊಸ ಭದ್ರತಾ ವೈಶಿಷ್ಟ್ಯವಾಗಿರುವಂತೆ ಕಂಡು ಬರುತ್ತಿದ್ದು,ಇದನ್ನು ಕಳಪೆಯಾಗಿ ಜಾರಿಗೊಳಿಸಲಾಗಿದೆ ಎಂದು ಕೇರಳದ ಕಣ್ಣೂರಿನ ನೇತ್ರವೈದ್ಯ ಕೆ.ವಿ.ಬಾಬು ಹೇಳಿದರು. ಅವರು ಮೆಡಿಕಲ್ ಕಾಲೇಜುಗಳು, ಸಾಂಪ್ರದಾಯಿಕ ಔಷಧಿ ಸಂಸ್ಥೆಗಳ ತಪ್ಪುದಾರಿಗೆಳೆಯುವ ಜಾಹೀರಾತುಗಳು,ಲಸಿಕೆ ವೆಚ್ಚ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮಾಹಿತಿಗಳನ್ನು ಕೋರಲು ಕಳೆದ 15 ವರ್ಷಕ್ಕೂ ಹೆಚ್ಚು ಸಮಯದಿಂದ ಆರ್‌ಟಿಐ ಬಳಸುತ್ತಿದ್ದಾರೆ.
‘ಹೊಸ ಇಮೇಲ್ ಮೂಲಕ ಒಟಿಪಿ ವೈಶಿಷ್ಟ್ಯವು ಪ್ರವೇಶವನ್ನು ಜಟಿಲಗೊಳಿಸಿದೆ,ಅದು ಯಾವಾಗ ಬರುತ್ತದೆ ಎನ್ನುವುದೇ ನಮಗೆ ಗೊತ್ತಾಗುವುದಿಲ್ಲ. ಇದು ಬಳಕೆದಾರರನ್ನು ಹೈರಾಣಾಗಿಸುತ್ತದೆ ’ ಎಂದು ಬಾಬು ತಿಳಿಸಿದರು.
ಹೊಸ ವೈಶಿಷ್ಟ್ಯವು ಬರುವ ಮುನ್ನ ಬಳಕೆದಾರರು ತಮ್ಮ ಇಮೇಲ್ ಗುರುತು ಮತ್ತು ಆರ್‌ಟಿಐ ನಂಬರ್‌ನ್ನು ಪಂಚ್ ಮಾಡಬೇಕಿತ್ತು,ಇದರಿಂದ ಸೃಷ್ಟಿಯಾದ ಭದ್ರತಾ ಕೋಡ್‌ನ್ನು ಟೈಪ್ ಮಾಡಿದರೆ ಪೋರ್ಟಲ್ ವಿಚಾರಣೆ ಮತ್ತು ಉತ್ತರಗಳ ಸ್ಥಿತಿಗತಿಯನ್ನು ತಿಳಿದುಕೊಳ್ಳಲು ಅವಕಾಶವನ್ನು ನೀಡುತ್ತಿತ್ತು.
ಈಗ ಕಾಣಿಸಿಕೊಳ್ಳುವ ಪಾಪ್-ಅಪ್ ಸಂದೇಶವು ‘ಇಮೇಲ್ ಒಟಿಪಿ ಸಮಯವನ್ನು ತೆಗೆದುಕೊಳ್ಳಬಹುದು. ನೀವು ಇಮೇಲ್ ಒಟಿಪಿಯನ್ನು ನಮೂದಿಸಿದ ತಕ್ಷಣ ಆರ್‌ಟಿಐ ಮನವಿ/ಮೇಲ್ಮನವಿಯ ಸ್ಥಿತಿಗತಿಯನ್ನು ನೋಡಬಹುದು. ಒಟಿಪಿಗೆ ಸಮಯಮಿತಿ ಇಲ್ಲ’ ಎಂದು ಹೇಳುತ್ತದೆ.
ಆದರೆ ಒಟಿಪಿಯನ್ನು ನಮೂದಿಸಬೇಕಿರುವ ಹೊಸ ಪುಟವು ಐದು ನಿಮಿಷಗಳ ಕೌಂಟ್‌ಡೌನ್ ಟೈಮರ್‌ನ್ನು ಪ್ರದರ್ಶಿಸುತ್ತದೆ ಮತ್ತು ಶೂನ್ಯಕ್ಕಿಳಿದ ಬಳಿಕ ಪದೇ ಪದೇ ನವೀಕರಣಗೊಳ್ಳುತ್ತದೆ.
‘ನನ್ನ ಪ್ರಕರಣದಲ್ಲಿ ಇಮೇಲ್ ಒಟಿಪಿ ತಕ್ಷಣವೇ ಬಂದಿತ್ತು. ಆದರೆ ಒಟಿಪಿಯನ್ನು ಬಳಸಲು ಮೂರು ಸಲ ಯತ್ನಿಸಿದ್ದರೂ ನನ್ನ ಆರ್‌ಟಿಐ ಅರ್ಜಿಯ ಸ್ಥಿತಿಗತಿ ಪುಟವನ್ನು ಪ್ರವೇಶಿಸಲು ನನಗೆ ಸಾಧ್ಯವಾಗಲಿಲ್ಲ’ ಎಂದು ಹೇಳಿದ ಕಾಮನ್ವೆಲ್ತ್ ಹ್ಯುಮನ್ ರೈಟ್ಸ್ ಇನಿಷಿಯೇಟಿವ್‌ನ ನಿರ್ದೇಶಕ ವೆಂಕಟೇಶ ನಾಯಕ್,ಪ್ರತಿ ಬಾರಿ ಇಮೇಲ್ ಒಟಿಪಿಯನ್ನು ನಮೂದಿಸಿದಾಗಲೂ ಹೊಸ ಸ್ವಯಂಚಾಲಿತ ಅಲ್ಫಾನ್ಯುಮರಿಕ್ ಭದ್ರತಾ ಕೋಡ್‌ನೊಂದಿಗೆ ಹೊಸ ಪುಟ ಕಾಣಿಸಿಕೊಳ್ಳುತ್ತಿತ್ತು. ನಿಸ್ಸಂಶಯವಾಗಿ ಈ ಹೆಚ್ಚುವರಿ ಭದ್ರತಾ ವ್ಯವಸ್ಥೆಯು ದೋಷಯುಕ್ತವಾಗಿದ್ದು, ಅದು ಆರ್‌ಟಿಐ ಅರ್ಜಿಯ ಸ್ಥಿತಿಗತಿ ಪುಟಕ್ಕೆ ಪ್ರವೇಶವನ್ನು ಒದಗಿಸಲು ಈ ದೋಷವು ಅಡ್ಡಿಯಾಗುತ್ತಿದೆ ಎಂದರು.
ಅನಾಮಧೇಯತೆಯನ್ನು ಬಯಸಿದ ದಿಲ್ಲಿಯ ವೈದ್ಯರೋರ್ವರು,ಇಮೇಲ್ ಒಟಿಪಿ ವೈಶಿಷ್ಟ್ಯವು ಕಳೆದ ನಾಲ್ಕು ದಿನಗಳಿಂದಲೂ ವಿಚಾರಣೆಗಳ ಸ್ಥಿತಿಗತಿ ಪುಟವನ್ನು ಪ್ರವೇಶಿಸುವ ತನ್ನ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ ಎಂದು ತಿಳಿಸಿದರು.
ಈ ದೋಷವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಆರ್‌ಟಿಐ ಉಪಕ್ರಮದ ಅನುಷ್ಠಾನದ ಹೊಣೆ ಹೊತ್ತಿರುವ ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ವಕ್ತಾರರೋರ್ವರು ಸುದ್ದಿಸಂಸ್ಥೆಗೆ ಸಮಜಾಯಿಷಿ ನೀಡಿದ್ದಾರೆ.