ಇರಾನ್ ಜೈಲಿನಿಂದ ಬಂಧಮುಕ್ತಗೊಂಡು ಮನೆಗೆ ಮರಳಿದ ಇಟಲಿ ಪತ್ರಕರ್ತೆ ಸಲಾ
ರೋಮ್: ಇಟಲಿ ಪತ್ರಕರ್ತೆ ಸೆಸಿಲಿಯ ಸಲಾ ಬಂಧಮುಕ್ತಗೊಂಡಿದ್ದು, ಅವರು ಸ್ವದೇಶಕ್ಕೆ ಮರಳುತ್ತಿದ್ದಾರೆ ಎಂದು ಬುಧವಾರ ಇಟಲಿ ಪ್ರಧಾನಿ ಜಾರ್ಜಿಯ ಮೆಲೋನಿ ತಿಳಿಸಿದ್ದಾರೆ.
ನಿಯಮಿತ ಪತ್ರಕರ್ತೆ ವೀಸಾದ ಆಧಾರದಲ್ಲಿ 29 ವರ್ಷದ ಸಲಾ ಇರಾನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಡಿಸೆಂಬರ್ 19ರಂದು ಅವರನ್ನು ಟೆಹ್ರಾನ್ ನಲ್ಲಿ ಬಂಧಿಸಲಾಗಿತ್ತು. ನಂತರ, ಇರಾನ್ ರಾಜಧಾನಿ ಟೆಹ್ರಾನ್ ನ ಕುಖ್ಯಾತ ಇವಿನ್ ಬಂಧೀಖಾನೆಯಲ್ಲಿ ಸೆರೆವಾಸದಲ್ಲಿಡಲಾಗಿತ್ತು.
2024ರಲ್ಲಿ ಜೋರ್ಡಾನ್ ಮೇಲೆ ನಡೆದಿದ್ದ ಡ್ರೋನ್ ದಾಳಿಯಲ್ಲಿ ಮೂವರು ಅಮೆರಿಕ ಸೇವಾ ಸದಸ್ಯರು ಹತ್ಯೆಗೊಳಗಾಗಲು ಇರಾನ್ ಉದ್ಯಮಿ ಮುಹಮ್ಮದ್ ಅಬೆದಿನಿ ಡ್ರೋನ್ ಬಿಡಿಭಾಗಗಳನ್ನು ಪೂರೈಸಿದ್ದು ಕಾರಣ ಎಂಬ ಆರೋಪದ ಮೇಲೆ ಅಮೆರಿಕವು ಹೊರಡಿಸಿದ್ದ ವಾರೆಂಟ್ ಆಧಾರದಲ್ಲಿ ಅವರನ್ನು ಬಂಧಿಸಿದ ಮೂರು ದಿನಗಳ ನಂತರ ಸಲಾ ಅವರನ್ನು ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಜೋರ್ಡಾನ್ ಮೇಲೆ ನಡೆದ ದಾಳಿಯಲ್ಲಿ ತನ್ನ ಯಾವುದೇ ಪಾತ್ರವನ್ನು ಇರಾನ್ ತಳ್ಳಿ ಹಾಕಿತ್ತು.
“ಸಲಾ ಅವರನ್ನು ಬಂಧಮುಕ್ತಗೊಳಿಸಲಾಗಿದೆ. ಅವರನ್ನು ಬಂಧಮುಕ್ತಗೊಳಿಸಲು ನಡೆದ ತೀವ್ರ ಸ್ವರೂಪದ ರಾಜತಾಂತ್ರಿಕ ಹಾಗೂ ಗುಪ್ತಚರ ಪ್ರಯತ್ನಗಳಿಗೆ ಧನ್ಯವಾದಗಳು” ಎಂದು ಇಟಲಿ ಪ್ರಕಟಣೆಯಲ್ಲಿ ಹೇಳಲಾಗಿದೆ. ಈ ಪ್ರಕಟಣೆಯಲ್ಲಿ ಅಬೆದಿನಿ ಪ್ರಕರಣದ ಕುರಿತು ಏನನ್ನೂ ಉಲ್ಲೇಖಿಸಲಾಗಿಲ್ಲ. ಅಬೆದಿನಿ ಇನ್ನೂ ಮಿಲನ್ ಬಂಧೀಖಾನೆಯಲ್ಲಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಇಟಲಿ ಪ್ರಧಾನಿ ಜಾರ್ಜಿಯ ಮೆಲೋನಿ, “ಸಲಾ ಸೆಸಿಲಿಯ ಮರಳುವಿಕೆಗೆ ನೆರವು ನೀಡಿದ ಎಲ್ಲರಿಗೂ ನನ್ನ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ” ಎಂದು ಧನ್ಯವಾದ ಸಲ್ಲಿಸಿದ್ದಾರೆ. ಬುಧವಾರ ಸಂಜೆ ಸಲಾ ರೋಮ್ ಗೆ ಮರಳಿದ ನಂತರ, ಇಟಲಿ ಪ್ರಧಾನಿ ಜಾರ್ಜಿಯ ಮೆಲೋನಿ ಅವರನ್ನು ಖುದ್ದಾಗಿ ಅಭಿನಂದಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಸಲಾ ಐ1 ಫೋಗ್ಲಿಯ ದಿನಪತ್ರಿಕೆ ಹಾಗೂ ಪಾಡ್ ಕಾಸ್ಟ್ ಕಂಪನಿಯಾದ ಕೋರಾ ಮೀಡಿಯಾಗೆ ಕೆಲಸ ಮಾಡುತ್ತಿದ್ದಾರೆ. ಅವರ ಕ್ಷಿಪ್ರ ಬಿಡುಗಡೆಯು ಮೆಲೋನಿಯ ರಾಜತಾಂತ್ರಿಕ ಗೆಲುವಾಗಿದ್ದು, ಈ ಪ್ರಕರಣವು ವಾರಗಟ್ಟಲೆ ವಿಳಂಬವಾಗಬಹುದು ಎಂದು ಅವರು ಭಾವಿಸಿದ್ದರು.
ವಾರಾಂತ್ಯದಲ್ಲಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಭೇಟಿ ಮಾಡಲು ಇಟಲಿಯ ಪ್ರಧಾನಿ ಜಾರ್ಜಿಯ ಮೆಲೋನಿ ಫ್ಲೋರಿಡಾಗೆ ಅಚ್ಚರಿಯ ಭೇಟಿ ನೀಡಿದ್ದರು. ಆದರೆ, ಈ ಮಾತುಕತೆಯ ಯಾವುದೇ ವಿವರಗಳು ಬಹಿರಂಗಗೊಂಡಿಲ್ಲ. ಆದರೆ, ಅವರಿಬ್ಬರೂ ಸಲಾ ವಿಷಯದ ಕುರಿತು ಚರ್ಚಿಸಿದರು ಎಂದು ಇಟಲಿ ಉಪ ಪ್ರಧಾನಿ ಮ್ಯಾಟಿಯೊ ಸಾಲ್ವಿನಿ ಹೇಳಿದ್ದರು.
ತಮ್ಮ ಅಧಿಕಾರಾವಧಿಯ ಉದ್ಘಾಟನಾ ದಿನವಾದ ಜನವರಿ 20ಕ್ಕೆ ಮುಂಚಿತವಾಗಿಯೇ ಸಲಾರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವ ಒಪ್ಪಂದಕ್ಕೆ ಡೊನಾಲ್ಡ್ ಟ್ರಂಪ್ ಸಮ್ಮತಿಸಿದ್ದರು ಎಂದು ಇಟಲಿ ದಿನಪತ್ರಿಕೆಯೊಂದು ವರದಿ ಮಾಡಿದೆ. ಈ ವರದಿಯ ಬಗ್ಗೆ ಮೆಲೋನಿ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇತ್ತೀಚಿನ ದಿನಗಳಲ್ಲಿ ಇರಾನ್ ಭದ್ರತಾ ಪಡೆಗಳು ಹಲವಾರು ವಿದೇಶಿ ಪ್ರಜೆಗಳು ಹಾಗೂ ದ್ವಿಪೌರತ್ವ ಹೊಂದಿರುವ ಹತ್ತಾರು ಮಂದಿಯನ್ನು ಬಂಧಿಸಿದ್ದು, ಅವರನ್ನೆಲ್ಲ ದೇಶ ದ್ರೋಹ ಮತ್ತು ಭದ್ರತೆಯ ಆರೋಪದ ಮೇಲೆ ಬಂಧಿಸಲಾಗಿದೆ. ಇಂತಹ ಬಂಧನಗಳ ಮೂಲಕ ಇರಾನ್ ಇತರ ದೇಶಗಳಿಂದ ವಿನಾಯಿತಿ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಮಾನವ ಹಕ್ಕು ಗುಂಪುಗಳು ಆರೋಪಿಸಿವೆ. ಆದರೆ, ಈ ಆರೋಪಗಳನ್ನು ಇರಾನ್ ನಿರಾಕರಿಸಿದೆ.
ಇದಕ್ಕೂ ಮುನ್ನ, ಅಬೆದಿನಿಯ ಬಂಧನವು ಒತ್ತೆಯಾಳು ತೆಗೆದುಕೊಳ್ಳುವುದಕ್ಕೆ ಸಮವಾಗಿದೆ ಎಂದು ರವಿವಾರ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಘೇಯಿ ಆರೋಪಿಸಿದ್ದರು.