ಫಾರ್ಮ್ಯುಲಾ-ಇ ರೇಸ್ ಪ್ರಕರಣ | ಕೆ.ಟಿ.ರಾಮರಾವ್ ವಿರುದ್ಧ ಪ್ರಕರಣ ರದ್ದತಿಗೆ ತೆಲಂಗಾಣ ಹೈಕೋರ್ಟ್ ನಕಾರ

Update: 2025-01-07 16:06 GMT

ಕೆ.ಟಿ.ರಾಮರಾವ್ | PC : ANI 

ಹೈದರಾಬಾದ್: ಭ್ರಷ್ಟಾಚಾರ ನಿಗ್ರಹ ಘಟಕ(ಎಸಿಬಿ)ವು ಫಾರ್ಮ್ಯುಲಾ-ಇ ರೇಸ್‌ಗೆ ಸಂಬಂಧಿಸಿದಂತೆ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ವಿರುದ್ಧ ದಾಖಲಿಸಿರುವ ಎಫ್‌ಐಆರ್‌ನ್ನು ರದ್ದುಗೊಳಿಸಲು ತೆಲಂಗಾಣ ಉಚ್ಚ ನ್ಯಾಯಾಲಯವು ಮಂಗಳವಾರ ನಿರಾಕರಿಸಿದೆ ಮತ್ತು ಅವರಿಗೆ ಬಂಧನದ ವಿರುದ್ಧ ನೀಡಿದ್ದ ರಕ್ಷಣೆಯನ್ನು ಹಿಂದೆಗೆದುಕೊಂಡಿದೆ.

ಇದರ ಬೆನ್ನಿಗೇ ಜಾರಿ ನಿರ್ದೇಶನಾಲಯವು ಜ.16ರಂದು ತನ್ನ ಮುಂದೆ ವಿಚಾರಣೆಗೆ ಹಾಜರಾಗುವಂತೆ ರಾವ್‌ ಗೆ ಹೊಸದಾಗಿ ಸಮನ್ಸ್ ಹೊರಡಿಸಿದೆ. ರಾವ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ವಾದವಿವಾದಗಳನ್ನು ಆಲಿಸಿದ್ದ ಉಚ್ಚ ನ್ಯಾಯಾಲಯವು ಡಿ.31ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

2023ರಲ್ಲಿ ಫಾರ್ಮ್ಯುಲಾ-ಇ ರೇಸ್ ನಡೆಸಲು ಅನುಮತಿಯಿಲ್ಲದೆ ಹಣ ಪಾವತಿಸಿದ್ದಕ್ಕಾಗಿ ಮತ್ತು ಸರಕಾರದ ಬೊಕ್ಕಸಕ್ಕೆ ಸುಮಾರು 55 ಕೋ.ರೂ. ನಷ್ಟವನ್ನುಂಟು ಮಾಡಿದ್ದಕ್ಕಾಗಿ ಆಗಿನ ಬಿಆರ್‌ಎಸ್ ಸರಕಾರದಲ್ಲಿ ಮುನ್ಸಿಪಲ್ ಆಡಳಿತ ಸಚಿವರಾಗಿದ್ದ ರಾವ್ ವಿರುದ್ಧ ಎಸಿಬಿ ಡಿ.19ರಂದು ಪ್ರಕರಣವನ್ನು ದಾಖಲಿಸಿತ್ತು.

ಪ್ರಕರಣದಲ್ಲಿ ಹಿರಿಯ ಐಎಎಸ್ ಅಧಿಕಾರಿ ಅರವಿಂದ ಕುಮಾರ ಮತ್ತು ಮಾಜಿ ಅಧಿಕಾರಿ ಬಿಎಲ್‌ಎನ್ ರೆಡ್ಡಿ ಅವರನ್ನೂ ಆರೋಪಿಗಳನ್ನಾಗಿ ಹೆಸರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News