ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ತ್ಯಾಜ್ಯದ ಸುರಕ್ಷಿತ ವಿಲೇವಾರಿಗೆ ಕ್ರಮ ಕೈಗೊಳ್ಳಿ : ಮಧ್ಯಪ್ರದೇಶ ಸರಕಾರಕ್ಕೆ ಹೈಕೋರ್ಟ್ ನಿರ್ದೇಶ
ಭೋಪಾಲ: ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ತ್ಯಾಜ್ಯವನ್ನು ಸುರಕ್ಷಾ ಶಿಷ್ಟಾಚಾರಕ್ಕೆ ಅನುಗುಣವಾಗಿ ವಿಲೇವಾರಿ ಮಾಡುವಂತೆ ಹಾಗೂ ಈ ವಿಷಯದ ಕುರಿತ ತಪ್ಪು ಸುದ್ದಿಗಳನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯ ಸೋಮವಾರ ಮಧ್ಯಪ್ರದೇಶ ಸರಕಾರಕ್ಕೆ ನಿರ್ದೇಶಿಸಿದೆ.
ವಿಚಾರಣೆ ಸಂದರ್ಭ ರಾಜ್ಯ ಅಡ್ವೊಕೇಟ್ ಜನರಲ್ ಪ್ರಶಾಂತ್ ಸಿಂಗ್, ಕಂಟೈನರ್‌ಗಳಲ್ಲಿನ ತ್ಯಾಜ್ಯವನ್ನು ದೀರ್ಘ ಕಾಲ ಇರಿಸಲು ಸಾಧ್ಯವಿಲ್ಲ. ಆದುದರಿಂದ ಪಿತಾಂಪುರದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಾಗೂ ಅವರ ಮನಸ್ಸಿನಲ್ಲಿರುವ ಭೀತಿಯನ್ನು ಹೋಗಾಲಾಡಿಸಿ ತ್ಯಾಜ್ಯವನ್ನು ಇಳಿಸಲು ಅನುಮತಿ ಕೋರಿದರು.
ಯೂನಿಯನ್ ಕಾರ್ಬೈಡ್‌ನ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದ ಕಾಲ್ಪನಿಕ ಹಾಗೂ ಕಲ್ಪಿತ ಸುದ್ದಿಗಳಿಂದಾಗಿ ಪೀತಾಂಪುರ ಟೌನ್ ಶಿಪ್ ನಲ್ಲಿ ಅಶಾಂತಿ ತಲೆದೋರಿದೆ ಎಂದು ಸಿಂಗ್ ಪ್ರತಿಪಾದಿಸಿದರು.
ರಾಜ್ಯ ಸರಕಾರದ ಪ್ರತಿಪಾದನೆಗೆ ಪ್ರತಿಕ್ರಿಯಿಸಿದ ನ್ಯಾಯಾಲಯ, ತ್ಯಾಜ್ಯ ವಿಲೇವಾರಿಯ ಕುರಿತು ಯಾವುದೇ ತಪ್ಪು ಸುದ್ದಿ ಪ್ರಸಾರ ಮಾಡದಂತೆ ಮುದ್ರಣ, ಶ್ಯವ್ಯ ಹಾಗೂ ದೃಶ್ಯ ಮಾದ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಸೂಚಿಸಿತು.
ವಿಚಾರಣೆಯ ವೇಳೆ ಭೋಪಾಲ್ ನಿಂದ ಪೀತಾಂಪುರಕ್ಕೆ ಸಾಗಿಸಲಾದ 12 ಮುಚ್ಚಿದ ಕಂಟೈನರ್‌ಗಳಲ್ಲಿರುವ ತ್ಯಾಜ್ಯವನ್ನು ಇಳಿಸಲು ಮೂರು ದಿನಗಳ ಕಾಲಾವಕಾಶವನ್ನು ರಾಜ್ಯ ಸರಕಾರ ಕೋರಿತು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವ ಅಧಿಕಾರ ನಿಮಗೆ ಇದೆ. ಸುರಕ್ಷಾ ಮಾರ್ಗಸೂಚಿಗಳ ಪ್ರಕಾರ ತ್ಯಾಜ್ಯ ಸುರಕ್ಷಿತ ವಿಲೇವಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿತು.