ಮತದಾರರ ಪಟ್ಟಿ ತಿರುಚುವಿಕೆ ಆರೋಪವನ್ನು ಅಲ್ಲಗಳೆದ ಸಿಇಸಿ ರಾಜೀವ್ ಕುಮಾರ್
ಹೊಸದಿಲ್ಲಿ: ಮತದಾರರ ಪಟ್ಟಿಯನ್ನು ತಿರುಚಲಾಗುತ್ತಿದೆ ಎಂಬ ಆರೋಪಗಳನ್ನು ಮಂಗಳವಾರ ಅಲ್ಲಗಳೆದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಸಮರ್ಪಕವಾದ ದಾಖಲೀಕರಣ, ಕ್ಷೇತ್ರ ಪರಿಶೀಲನೆ ಹಾಗೂ ಸಂಬಂಧಿತ ವ್ಯಕ್ತಿಗೆ ದೂರು ಸಲ್ಲಿಸುವ ಅವಕಾಶ ನೀಡದೆ ಮತದಾರರ ಹೆಸರನ್ನು ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಮತದಾರರ ಹೆಸರು ಸೇರ್ಪಡೆ ಹಾಗೂ ಅಳಿಸುವಿಕೆ ಪ್ರಕ್ರಿಯೆಯು ಪಾರದರ್ಶಕ, ಕಠಿಣ ಹಾಗೂ ದೋಷಪೂರಿತ ಬದಲಾವಣೆ ಪ್ರತಿರೋಧಕವಾಗಿದೆ ಎಂದು ಅವರು ಸಮರ್ಥಿಸಿಕೊಂಡರು.
ಮುಖ್ಯ ಚುನಾವಣಾ ಆಯುಕ್ತರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ದಿಲ್ಲಿ ವಿಧಾನಸಭಾ ಚುನಾವಣಾ ವೇಳಾಪಟ್ಟಿ ಪ್ರಕಟಣೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜೀವ್ ಕುಮಾರ್, “ಮತದಾರರ ಪಟ್ಟಿ ಪ್ರಕ್ರಿಯೆಯ ಪ್ರತಿ ಹಂತವೂ ಪಾರದರ್ಶಕತೆ ಹಾಗೂ ಉತ್ತರದಾಯಿತ್ವದ ಮೂಲಗಳನನ್ನು ಹೊಂದಿದೆ. ಕಟ್ಟುನಿಟ್ಟಿನ ಶಿಷ್ಟಾಚಾರಕ್ಕೆ ಒಳಪಡದೆ ಮತದಾರರ ಹೆಸರುಗಳನ್ನು ಅಳಿಸಿ ಹಾಕುವುದು ಅಸಾಧ್ಯವಾಗಿದ್ದು, ಈ ಕುರಿತು ಹಲವು ಹಂತಗಳಲ್ಲಿ ಆಕ್ಷೇಪಿಸಲು ಪ್ರತಿ ಪಕ್ಷಕ್ಕೂ ಅಧಿಕಾರವಿದೆ” ಎಂದು ಪ್ರತಿಪಾದಿಸಿದರು.
ಮತದಾರರ ಪಟ್ಟಿ ನಿರ್ವಹಣಾ ವಿಧಾನದ ಸಮಗ್ರ ಪ್ರಕ್ರಿಯೆ ಕುರಿತೂ ರಾಜೀವ್ ಕುಮಾರ್ ವಿಸ್ತೃತವಾಗಿ ವಿವರಿಸಿದರು.