ಟೆಕ್ಕಿ ಅತುಲ್ ಸುಭಾಷ್ ಪುತ್ರನನ್ನು ತಾಯಿಯ ವಶಕ್ಕೆ ಒಪ್ಪಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್
ಹೊಸದಿಲ್ಲಿ: 2024ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಬೆಂಗಳೂರು ಮೂಲದ ಟೆಕ್ಕಿ ಅತುಲ್ ಸುಭಾಷ್ ಪುತ್ರನನ್ನು ಆತನ ತಾಯಿಯ ವಶಕ್ಕೆ ಒಪ್ಪಿಸಲು ಮಂಗಳವಾರ ನಿರಾಕರಿಸಿರುವ ಸುಪ್ರೀಂ ಕೋರ್ಟ್, ಆಕೆ ಮಗುವಿನ ಪಾಲಿಗೆ ಅಪರಿಚಿತಳಾಗಿದ್ದಾಳೆ ಎಂದು ಅಭಿಪ್ರಾಯಪಟ್ಟಿದೆ.
ಮಗುವಿನ ವಶದ ವಿಷಯದ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾಯಾಲಯದೆದುರು ಪ್ರಸ್ತಾಪಿಸಬಹುದು ಎಂದು ನ್ಯಾ. ಬೇಲಾ ಎಂ. ತ್ರಿವೇದಿ ಹಾಗೂ ಎನ್.ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡಿದ್ದ ನ್ಯಾಯಪೀಠ ಹೇಳಿತು.
“ಅರ್ಜಿದಾರರು ಮಗುವಿನ ಅಪರಿಚಿತರು ಎಂದು ಹೇಳಲು ವಿಷಾದವಾಗುತ್ತಿದೆ. ನಿಮಗೆ ಬೇಕೆನಿಸಿದರೆ, ಮಗುವನ್ನು ಭೇಟಿಯಾಗಿ. ಒಂದು ವೇಳೆ ಮಗು ನಿಮ್ಮ ವಶಕ್ಕೆ ಬೇಕು ಎಂದಾದರೆ, ಅದಕ್ಕೇ ಪ್ರತ್ಯೇಕ ವಿಧಾನವಿದೆ” ಎಂದು ನ್ಯಾಯಪೀಠ ಹೇಳಿತು.
ತನ್ನ ಸಾವಿಗೆ ನನ್ನ ಪತ್ನಿ ಹಾಗೂ ನನ್ನ ಪತ್ನಿಯ ಸಂಬಂಧಿಕರೇ ಕಾರಣ ಎಂದು ಸುದೀರ್ಘ ಸಂದೇಶವೊಂದನ್ನು ವೀಡಿಯೋ ಮಾಡಿ ಡಿಸೆಂಬರ್ 9, 2024ರಂದು 34 ವರ್ಷದ ಅತುಲ್ ಸುಭಾಷ್ ಬೆಂಗಳೂರಿನ ಮುನ್ನೆಕೊಳಲುವಿನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.