ಛತ್ತೀಸ್ ಗಢ | ಪತ್ರಕರ್ತ ಮುಖೇಶ್ ಚಂದ್ರಕರ್ ಕೊಲೆ ಪ್ರಕರಣ : ಪ್ರಮುಖ ಆರೋಪಿ ಬಂಧನ
ರಾಯ್ಪುರ : ಪತ್ರಕರ್ತ ಮುಖೇಶ್ ಚಂದ್ರಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ರವಿವಾರ ರಾತ್ರಿ ಹೈದರಾಬಾದ್ ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸುರೇಶ್ ಚಂದ್ರಕರ್ ಬಂಧಿತ ಆರೋಪಿ. ಈತ ಮುಖೇಶ್ ಚಂದ್ರಕರ್ ಕೊಲೆಯ ಹಿಂದಿನ ರುವಾರಿ ಎಂದು ಹೇಳಲಾಗಿದೆ.
ಸುರೇಶ್ ಹೈದರಾಬಾದ್ ನಲ್ಲಿರುವ ತನ್ನ ಚಾಲಕನ ನಿವಾಸದಲ್ಲಿ ತಲೆಮರೆಸಿಕೊಂಡಿದ್ದ. ಸಿಸಿಟಿವಿ ದೃಶ್ಯವಾಳಿಗಳು ಮತ್ತು ಮೊಬೈಲ್ ನೆಟ್ ವರ್ಕ್ ಆಧಾರದಲ್ಲಿ ಆತನನ್ನು ಹೈದರಾಬಾದ್ ನಲ್ಲಿ ಬಂಧಿಸಲಾಗಿದ್ದು, ಸುರೇಶ್ ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುರೇಶ್ ಗೆ ಸಂಬಂಧಿಸಿದ ನಾಲ್ಕು ಬ್ಯಾಂಕ್ ಖಾತೆಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಛತ್ತೀಸ್ ಗಢದ ಕಂಕೇರ್ ಜಿಲ್ಲೆಯಲ್ಲಿ ಈತನ ಪತ್ನಿಯನ್ನು ಕೂಡ ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಛತ್ತೀಸ್ ಗಢದ ಬಿಜಾಪುರದಲ್ಲಿ ಭ್ರಷ್ಟಾಚಾರದ ಕುರಿತು ವರದಿ ಮಾಡಿದ ಕೆಲವೇ ದಿನಗಳಲ್ಲಿ ಸ್ವತಂತ್ರ ಪತ್ರಕರ್ತ ಮುಖೇಶ್ ಚಂದ್ರಕರ್ ನಾಪತ್ತೆಯಾಗಿದ್ದರು. ಈ ಕುರಿತು ತನಿಖೆ ನಡೆಸಿದಾಗ ಸೆಪ್ಟಿಕ್ ಟ್ಯಾಂಕ್ ನಲ್ಲಿ ಮುಖೇಶ್ ಚಂದ್ರಕರ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಛತ್ತೀಸ್ ಗಢದ ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿ ಸಂಘರ್ಷದ ಕುರಿತು ವರದಿ ಮಾಡಿ ಮನ್ನಣೆ ಗಳಿಸಿದ್ದ ಪತ್ರಕರ್ತ ಮುಖೇಶ್ ಚಂದ್ರಕರ್ ಹೆದ್ದಾರಿ ಯೋಜನೆಯಲ್ಲಿನ ಹಗರಣದ ಕುರಿತು ಇತ್ತೀಚೆಗೆ ವರದಿಯನ್ನು ಮಾಡಿದ್ದರು. ಹೆದ್ದಾರಿ ಯೋಜನೆಯಲ್ಲಿನ ಹಗರಣವನ್ನು ಬಹಿರಂಗಪಡಿಸಿದ್ದಕ್ಕಾಗಿ ಅವರಿಗೆ ಬೆದರಿಕೆ ಕರೆ ಬಂದಿತ್ತು ಎಂದು ಮೃತ ಪತ್ರಕರ್ತನ ಕುಟುಂಬವು ಆರೋಪಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಈ ಮೊದಲು ರಿತೇಶ್ ಚಂದ್ರಾಕರ್, ದಿನೇಶ್ ಚಂದ್ರಾಕರ್ ಹಾಗೂ ಮಹೇಂದ್ರ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಸುರೇಶ್ ಚಂದ್ರಾಕರ್ ತಲೆ ಮರೆಸಿಕೊಂಡಿದ್ದ. ತಡರಾತ್ರಿ ಆತನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ.